
ಭಟ್ಕಳ: ಜಿಲ್ಲೆಯಲ್ಲಿ ಕಳೆದ 12 ವರ್ಷದ ಹಿಂದೆ ಆರಂಭಗೊಂಡ ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಶ್ರೇಯೋಭೀವ್ರದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದು, ಈ ಸಂಸ್ಥೆಯ ಶ್ರಮಕ್ಕೆ 13 ನೇ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 5 ಮತ್ತು 6ನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಸಂಸ್ಥೆ ರಾಜ್ಯದಲ್ಲಿಯೇ ಭಟ್ಕಳವನ್ನು ಶೈಕ್ಷಣಿಕ ವಲಯದಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದೆ.
2024-2025ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮುರುಡೇಶ್ವರದ ಪ್ರತಿಷ್ಠಿತ ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಇಬ್ಬರು ವಿದ್ಯಾರ್ಥಿಗಳಾದ ನಮೃತಾ ಅಶೋಕ ನಾಯ್ಕ 99.36% ಮತ್ತು ಅಭಯ ಎನ್. ರಾಣಿಮನೆ 99.20% ಕ್ರಮವಾಗಿ 5ನೇ ಸ್ಥಾನ ಮತ್ತು 6ನೇ ಸ್ಥಾನ ಪಡೆದುಕೊಂಡಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಎಲ್.ಕೆ.ಜಿ ಯಿಂದ ಪದವಿ ಶಿಕ್ಷಣದ ತನಕ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಜೊತೆಗೆ ವಿದ್ಯಾಭ್ಯಾಸಕ್ಕೆ ಪೂರಕವಾಗುವಂತೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಸಹ ನೀಡುತ್ತಾ ಬಂದಿದ್ದಾರೆ. ಇನ್ನು ಇಲ್ಲಿನ ಬಡ ಕುಟುಂಬದ ಮಕ್ಕಳಿಗೆ, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಬೀನಾ ವೈದ್ಯ ಎಜ್ಯುಕೇಶನ್ ಟ್ರಸ್ಟ ಸದಾ ಕಾಲ ಅವರಿಗೆ ಬೆನ್ನೆಲುಬಾಗಿದ್ದು, ಕಳೆದ ವರ್ಷದಿಂದ ಆರಂಭವಾದ ಅಕ್ಷರ ಪರ್ವ ಎನ್ನುವ ವಿನೂತನ ಕಾರ್ಯಕ್ರಮವೂ ವಿದ್ಯಾರ್ಥಿಗಳ ವಿದ್ಯಾರ್ಜನೆ ಮಹತ್ವದ ಬೆಂಬಲ ಸಹಕಾರ ನೀಡುತ್ತಾ ಬಂದಿದೆ. ಒಂದು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಯಾವೆಲ್ಲ ಮಾದರಿಯಲ್ಲಿ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಅಂಕ ಗಳಿಕೆಯಲ್ಲಿಯೂ ಸಹ ವಿದ್ಯಾರ್ಥಿಗಳನ್ನು ರೂಪಿಸುತ್ತಾ ಬಂದಿರುದಕ್ಕೆ ಈ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 5ಮತ್ತು 6ನೇ ರ‍್ಯಾಂಕ್ ಗಳಿಕೆಯೇ ಸಾಕ್ಷಿಯಾಗಿದೆ.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶ ಎಲ್ಲಾ ಮಕ್ಕಳು ಉತ್ತಮ ರೀತಿಯಲ್ಲಿ ಶಿಕ್ಷಿತರಾಗಬೇಕೆಂಬುದಾಗಿದೆ. ಈ ಹಿನ್ನೆಲೆಯಲ್ಲಿ 2012 ರಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದು, ಮುಖ್ಯವಾಗಿ ಬಡತನದಲ್ಲಿದ್ದು ಕಲಿಕೆಯಲ್ಲಿ ಆಸಕ್ತಿ ಮತ್ತು ಸಾಮರ್ಥ್ಯ ಇದ್ದವರಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಬಡ ಮಕ್ಕಳು ವಿದ್ಯಾಭ್ಯಾಸದ ಆಸಕ್ತಿ ಇರುವ 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯು ಪಾಲಿಸುತ್ತಾ ಬಂದಿದೆ. ಈ ವರ್ಷ ಶಿಕ್ಷಣ ಸಂಸ್ಥೆಯು 30 ವಿದ್ಯಾರ್ಥಿಗಳನ್ನು ಅಕ್ಷರ ಪರ್ವದ ಯೋಜನೆಯ ಮೂಲಕ ಸೇರ್ಪಡೆ ಮಾಡಿಕೊಡಲಾಗಿದೆ.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೂ ಉತ್ತಮ ಅಂಕ ಪಡೆಯಲು ಶಿಕ್ಷಣ ಸಂಸ್ಥೆಯ ಶಿಕ್ಷಕರು ಶಾಲಾ ಮಟ್ಟದಲ್ಲಿ ನಡೆಸಲಾಗುವ ಪರೀಕ್ಷೆ, ತರಗತಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಲಾಗಿದೆ. ಅಕ್ಟೋಬರ 15 ರೊಳಗಾಗಿ ಎಲ್ಲಾ ವಿಷಯದ ಪಾಠಬೋಧನೆಯನ್ನು ಮುಗಿಸಿ ಪುನಃ ಇನ್ನೊಂದು ಬಾರಿ ಎಲ್ಲಾ ವಿಷಯವನ್ನು ವಿದ್ಯಾರ್ಥಿಗಳಿಗೆ ಪರಿಷ್ಕರಣೆ ಮಾಡಿ ಒಟ್ಟು 7-8 ರಿಂದ ಪೂರ್ವ ಸಿದ್ದತಾ ಪರೀಕ್ಷೆಯನ್ನು ನಡೆಸಲಾಗಿದೆ. ಇವೆಲ್ಲದರ ಜೊತೆಗೆ ವಿದ್ಯಾರ್ಥಿಗಳು ಸಹ ಶಿಕ್ಷಕರು ತರಗತಿಯಲ್ಲಿ ಕಲಿಸುವ ಪಾಠಬೋಧನೆಯನ್ನು ಮನೆಗೆ ಹೋದ ಮೇಲೆ ಅದನ್ನು ಮತ್ತೆ ಓದಿ ವಿಷಯದ ಬಗ್ಗೆ ಹಿಡಿತ ಸಾಧಿಸಲಿದ್ದಾರೆ. ಇನ್ನು ಎಲ್ಲಾ ವಿದ್ಯಾರ್ಥಿಗಳ ಪಾಲಕರನ್ನು ಸಹ ಈ ವಿಚಾರದಲ್ಲಿ ಸಮಾಲೋಚನೆ ಮಾಡಿಕೊಳ್ಳುತ್ತಾ ಬಂದಿರುವ ಹಿನ್ನೆಲೆ ಸಂಸ್ಥೆ ರಾಜ್ಯದಲ್ಲಿಯೇ ಒಂದು ಹೆಸರು ಪಡೆಯುವಂತಾಗಿದೆ.
ರಾಜ್ಯದ ಜೊತೆಗೆ ಜಿಲ್ಲೆಯಲ್ಲಿ 3 ಮತ್ತು 4ನೇ ರ‍್ಯಾಂಕ್ ಸಹ ಪಡೆದುಕೊಂಡಿದ್ದು, ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಉತ್ತುಂಗಕ್ಕೇರಲು ಅವರ ಪಾಲಕರಿಗೆ ಅವರ ಮಕ್ಕಳ ಶ್ರೇಯೋಭಿವ್ರದ್ಧಿ ಸಾಧಿಸಲು ಸಾಧ್ಯವಾದಂತಾಗಿದೆ. ಈ ಮೂಲಕ ಜಿಲ್ಲೆ ಮತ್ತು ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯತ್ತ ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ದಾಪುಗಾಲು ಇಡುತ್ತಿವೆ.

“ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವೂ ನಮಗೆ ಸಂತಸ ತಂದಿದೆ. ಕಾರಣ ನಮ್ಮ ಸಂಸ್ಥೆ 12 ವರ್ಷ ಪೂರೈಸಿ 13ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಧರ್ಬದಲ್ಲಿ ರಾಜ್ಯಕ್ಕೆ 5 ಮತ್ತು 6ನೇ ರ‍್ಯಾಂಕ ಪಡೆದುಕೊಂಡಿದೆ. ನಮ್ಮಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರು ಈ ರೀತಿ ಉತ್ತಮ ಅಂಕ ಗಳಿಸಿರುವುದು ಸಂತಸವಾಗಿದೆ. ವಿದ್ಯಾರ್ಥಿಗಳೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಿಕೆಯಲ್ಲಿ ಮುನ್ನಡೆಯಬೇಕು. ಪಾಲಕರು ಸಹ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದಲ್ಲಿ ಅವರ ಭವಿಷ್ಯ ರೂಪುಗೊಳ್ಳಲಿದೆ. ಮುಖ್ಯವಾಗಿ ಬಡ ಮಕ್ಕಳಿಗೆ ಕಲಿಕೆಯಲ್ಲಿ ಸಾಮರ್ಥ್ಯ ಮತ್ತು ಅರ್ಹತೆ ಇರಲಿದ್ದು, ಆದರೆ ಹಣದ ಸಮಸ್ಯೆಯಿಂದ ಹಿಂಜರಿಯುತ್ತಾರೆ. ಹಾಗಾಗಿ ಅಂತಹವರಿಗೆ ನಾವು ಅವರ ಜೊತೆಗೆ ನಿಲ್ಲಲಿದ್ದೇವೆ. ಇಂತಹ ಮಕ್ಕಳನ್ನು ನಮ್ಮ ದೇಶದಲ್ಲಿ ಉನ್ನತ ಮಟ್ಟಕ್ಕೆ ಏರಬೇಕೆಂದು ಆಸೆ ಹಾಗೂ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ.ನಮ್ಮಲ್ಲಿನ ವಿದ್ಯಾರ್ಥಿಗಳು ವಿದೇಶದಲ್ಲಿಯೂ ಸಹ ಉದ್ಯೋಗ ಅವಕಾಶ ಸಿಕ್ಕಿದ್ದು ಇದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ.

“ನಮ್ಮ ಶಿಕ್ಷಣ ಸಂಸ್ಥೆಯನ್ನು ಎಸ್.ಎಸ್.ಎಲ್.ಸಿ.ಯಲ್ಲಿನ ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವದರ ಮೂಲಕ ರಾಜ್ಯಕ್ಕೆ ಪರಿಚಯಿಸಿದ್ದಾರೆ. ಪರೀಕ್ಷೆಯ ಪೂರ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಕಷ್ಟು ತಯಾರಿ ಮಾಡಿದ್ದು ಅವೆಲ್ಲದರ ಪ್ರತಿಫಲವಾಗಿ ರಾಜ್ಯಕ್ಕೆ ರ‍್ಯಾಂಕ ಬರಲು ಸಾಧ್ಯವಾಗಿದೆ. ಮುಂದಿನ ವರ್ಷಕ್ಕೆ 100 ಕ್ಕೆ 100 ಅಂಕ ಗಳಿಕೆಯನ್ನು ಪಡೆಯುವ ಗುರಿ ಹೊಂದಿದ್ದು ಈಗಾಗಲೇ ಆ ಕಾರ್ಯದಲ್ಲಿ ಸಂಸ್ಥೆಯ ಶಿಕ್ಷಕರು ಕಾರ್ಯಪ್ರವೃತ್ತರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಉತ್ತಮ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದೇವೆ.

