ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಡ್ಡುಕುಳಿ ಅವರ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ಅರಿಶಿಣ ಕುಂಕುಮ ಕಾರ್ಯಕ್ರಮವು ಇಲ್ಲಿನ ಶಿರಾಲಿ ಬಡ್ದುಕುಳಿ ದುರ್ಗಾಪರಮೇಶ್ವರಿ ದೇಗುಲದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕಸಾಪ ಮಾಜಿ ಅಧ್ಯಕ್ಷ, ದೇವಾಲಯದ ಗೌರವಧ್ಯಕ್ಷ ನ್ಯಾಯವಾದಿ ಶಂಕರ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಮ್ಮ ಊರಿನ ದುರ್ಗಾಪರಮೇಶ್ವರಿ ದೇಗುಲದಲ್ಲಿ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಬೇಕೆಂದು ಬಹಳ ಹಿಂದೆಯೇ ಯೋಜಿಸಿದ್ದು ರಾಜ್ಯೋತ್ಸವ ಮಾಸದಲ್ಲಿ ಸುಸಂದರ್ಭ ಒದಗಿ ಬಂದಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ. ಕವಿಗೋಷ್ಠಿಯ ಜೊತೆಗೆ ದೇಗುಲದ ಎಲ್ಲ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡ ನಮ್ಮೂರಿನೆಲ್ಲ ತಾಯಂದಿರಿಗೆ ಅರಿಸಿನ ಕುಂಕುಮ ನೀಡಿ ಅವರನ್ನು ಗೌರವಿಸುವ ಸಾರ್ಥಕತೆ ಕೂಡ ಈ ಕಾರ್ಯಕ್ರಮ ದೊಂದಿಗೆ ಸೇರಿಕೊಂಡಿದೆ. ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಜನಮನ ತಲುಪುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರಲ್ಲದೆ ನಮ್ಮೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕವಿಗೋಷ್ಠಿಯನ್ನು ಆಯೋಜಿಸಲು ಸಹಕರಿಸಿದ ಸಾಹಿತ್ಯ ಪರಿಷತ್ತಿಗೆ ಕ್ರತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ದೇಗುಲಗಳು ಭಕ್ತರಲ್ಲಿ ಧಾರ್ಮಿಕ ಚಿಂತನೆಗಳು, ಶ್ರದ್ಧೆಯನ್ನು ಬೆಳೆಸುವ ಜೊತೆಗೆ ವೈಚಾರಿಕತೆಯನ್ನು ಬೆಳೆಸುವ ಕೇಂದ್ರಗಳೂ ಆಗಬೇಕು. ಈ ದಿಸೆಯಲ್ಲಿ ಕವಿಗೋಷ್ಠಿ ಹಾಗೂ ಈ ಭಾಗದ ತಾಯಂದಿರನ್ನು ಅರಿಸಿನ ಕುಂಕುಮ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದರಲ್ಲದೆ ಪರಿಷತ್ತು ಜನರನ್ನು ತಲುಪುವಲ್ಲಿ ತಾಲ್ಲೂಕಿನ ಎಲ್ಲ ಸಹೃದಯರು ನೀಡುತ್ತಿರುವ ಸಹಕಾರ ತುಂಬಾ ದೊಡ್ಡದು ಎಂದು ನುಡಿದು ಅರ್ಥಪೂರ್ಣ ಕವಿತೆ ವಾಚಿಸಿದ ಎಲ್ಲ ಕವಿಮಿತ್ರರನ್ನು ಅಭಿನಂದಿಸಿದರು.
ಸಾಹಿತಿ ಶ್ರೀಧರ್ ಶೇಟ್ ಶಿರಾಲಿ ಮಾತನಾಡಿ ಬಡ್ದುಕುಳಿ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಕನ್ನಡ ಭುವನೇಶ್ವರಿಯ ಉತ್ಸವ ನಡೆಯುತ್ತಿದೆ. ಕನ್ನಡ ನಾಡಿನ ಬಾವುಟದ ಬಣ್ಣವು ಅರಿಸಿನ ಕುಂಕುಮವಾಗಿದ್ದು ಇಂದು ಇಲ್ಲಿ ಸೇವೆ ಸಲ್ಲಿಸಿದ ತಾಯಂದಿರಿಗೆ ಅರಿಸಿನ ಕುಂಕುಮವನ್ನು ಇಂದು ನೀಡುತ್ತಿರುವುದು ಅತ್ಯಂತ ಸೂಕ್ತ ಕಾರ್ಯಕ್ರಮವಾಗಿದೆ ಎಂದು ನುಡಿದು ಕವಿತೆ ವಾಚಿಸಿದರು. ಕಾರ್ಯಕ್ರಮದಲ್ಲಿ ನಂದನ್ ನಾಯ್ಕ, ರಾಜೀವಿ ಮೊಗೇರ್, ಸತೀಶ್ ದೇವಾಡಿಗ, ರಾಘವೇಂದ್ರ ಮಡಿವಾಳ, ಎಚ್ ಎನ್. ನಾಯ್ಕ, ಮಂಜುನಾಥ್ ಯಲ್ವಡಿಕವೂರ್, ಹೇಮಲತಾ ರಾವ್, ಶಂಕರ್ ನಾಯ್ಕ
ರಿತ್ವಿಕಾ ಚಂದ್ರಕಾಂತ್ ನಾಯ್ಕ ಕವಿತೆ ವಾಚಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕ್ರಿಯಾಶೀಲವಾಗಿ ಜನಮನ ತಲುಪುವಂತೆ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ್ ಶೇಟ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶಿಕ್ಷಕಿ ಹೇಮಲತಾ ರಾವ್ ನಿರೂಪಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ದೇವಾಲಯದ ಅಧ್ಯಕ್ಷ ಶ್ರೀಧರ್ ನಾಯ್ಕ ಉಪಸ್ಥಿತರಿದ್ದರು.ಶಿಕ್ಷಕ ಎಚ್ ಎನ್ ನಾಯ್ಕ ಎಲ್ಲರನ್ನು ಸ್ವಾಗತಿಸಿದರೆ ನಂದನ್ ನಾಯ್ಕ ವಂದಿಸಿದರು.ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಮುನ್ನುರಕ್ಕೂ ಹೆಚ್ಚು ಜನ ಸಾರ್ವಜನಿಕರು ಪಾಲ್ಗೊಂಡಿದ್ದರು. ದುರ್ಗಾಪರಮೇಶ್ವರಿಯ ಪೂಜೆಯ ನಂತರ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿ ಗೌರವಿಸಲಾಯಿತಲ್ಲದೆ ಎಲ್ಲ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.


