*ನಿತ್ಯ ಊರುರು ಅಲೆದು ಜನರ ಸಂಪನ್ಮೂಲ ಕ್ರೋಢಿಕರಿಸಿ ಆಶ್ರಮ ನಿರ್ಹಹಣೆ. ನಿಂದೆ, ಅವಮಾನ, ಹಲ್ಲೆಗೊಳಗಾದರು ಅನಾಥರ ಸೇವೆ ಮಾಡುತ್ತಿರುವ ನಾಗರಾಜ ನಾಯ್ಕ*
ಸಿದ್ದಾಪುರ: ಸಾಲಮಾಡಿಯಾದ್ರು ತುಪ್ಪ ತಿನ್ನು ಹಾಡನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲೊಬ್ಬರು ವ್ಯಕ್ತಿ ಅಲ್ಲಾ ಶಕ್ತಿ ಸಾಲಮಾಡಿ ಅನಾಥಾಶ್ರಮ ಕಟ್ಟಿರುವುದು ನಾಗರೀಕ ಸಮಾಜ ಹುಬ್ಬೇರಿಸುವಂತಾಗಿದೆ.
ಅವರಾರು ರಕ್ತ ಸಂಬಂಧಿಗಳು ಅಲ್ಲ. ಒಡಹುಟ್ಟಿದವರು ಅಲ್ಲ. ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳಿಂದ ದೂರವಾದ ಅನಾಥರಿಗಾಗಿ ಊರೂರು ಸುತ್ತಿ ಜನರು ನೀಡಿದ ಸಹಾಯದಿಂದ ಅಸಹಾಯಕರ ಪಾಲಿನ ಆಶ್ರಯದ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ರವರು.
ರಸ್ತೆ ಬದಿಯಲ್ಲಿ ಆನಾಥರಾಗಿ ತಿರುಗಾಡುವ ಅಸಹಾಯಕರ ಪಾಲಿನ ಆಸರೆಯ ತೊಟ್ಟಿಲಾಗಿ ಸಿದ್ದಾಪುರ ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಕೆಲಸ ಮಾಡುತ್ತಿದೆ. ಕಳೆದ 12 ವರ್ಷಗಳ ಹಿಂದೆ ನಾಗರಾಜ ನಾಯ್ಕ ಆರಂಭಿಸಿದ ಅನಾಥಾಶ್ರಮ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಿಧನದ ನಂತರ ಪುನೀತ್ ರಾಜಕುಮಾರ್ ಆಶ್ರಯಧಾಮ ಆನಾಥಾಶ್ರಮವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಈ ಆಶ್ರಮದಲ್ಲಿ 75 ಕ್ಕೂ ಅಧಿಕ ಜನ ಆಸರೆ ಪಡೆದಿದ್ದು, ಒಬ್ಬೊಬ್ಬರದು ಒಂದೊಂದು ಜಗತ್ತು ಎಂಬಂತೆ ವರ್ತಿಸುತ್ತಿದ್ದಾರೆ.
ಆಗಷ್ಟೇ ಜನ್ಮತಾಳಿ 14 ದಿನಗಳಿರುವಾಗಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಕಿರುಕುಳಕ್ಕೆ ಮನೆ ಬಿಟ್ಟು ಹೋದ ನಾಗರಾಜ ನಾಯ್ಕ ಉಡುಪಿಯ ಮಠವೊಂದರ ವರಾಂಡದಲ್ಲಿ ಮಲಗಿ ಹೋಟೆಲ್‌ನಲ್ಲಿ ಕೆಲಸ ಮಾಡಿ ಕಷ್ಟದ ದಿನಗಳನ್ನು ಸವೆಸಿದ ಅವರು ಕಳೆದ 12 ವರ್ಷಗಳ ಹಿಂದೆ ಶಿರಸಿಯ ಬಾಡಿಗೆ ಕಟ್ಟಡವೊಂದರಲ್ಲಿ ಅನಾಥಾಶ್ರಮ ಪ್ರಾರಂಭಿಸುತ್ತಾರೆ. ನಂತರ ಸಿದ್ದಾಪುರ ತಾಲೂಕಿನಲ್ಲಿ ಆಶ್ರಮ ನಡೆಸಿ ಪ್ರಸ್ತುತ ತಾಲೂಕಿನ ಮುಗದೂರಿನಲ್ಲಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಡೆಸುತ್ತಿದ್ದಾರೆ.
*ನಿರ್ಲಕ್ಷ್ಯಕ್ಕೊಳಗಾದವರ ಸೇವೆ* ಉತ್ತರ ಕನ್ನಡ ಜಿಲ್ಲೆ ಸಾಗರ, ಹೊಸನಗರ ಸೊರಬಾ, ಶಿಕಾರಿಪುರ, ಹಾವೇರಿ ಜಿಲ್ಲೆಯ ಹಾನಗಲ್ ಸೇರಿದಂತೆ ಎಲ್ಲೇ ಅಸಹಾಯಕರು ಕಂಡು ಬಂದರೂ ಫೋನ್ ಬರುವುದು ಆನಾಥ ರಕ್ಷಕ ನಾಗರಾಜ ನಾಯ್ಕರಿಗೆ ಸುದ್ದಿ ತಿಳಿದ ತಕ್ಷಣವೇ ಧಾವಿಸಿ ಆಶ್ರಮಕ್ಕೆ ಕರೆ ತಂದು ಆಸರೆ ನೀಡುತ್ತಿರುವ ನಾಗರಾಜ ನಾಯ್ಕರ ಕೆಲಸವನ್ನು ಕೋಟಿ ರೂಪಾಯಿ ಕೊಟ್ಟರು ಸಹ ಮಾಡಲು ಯಾರು ಮುಂದಾಗುತ್ತಿಲ್ಲ. ಸ್ವಂತ ತಂದೆ-ತಾಯಿಯ ಕಿರಿಕಿರಿಯನ್ನು ಸಹಿಸಿಕೊಳ್ಳಲಾಗದೇ ಮನೆಯಿಂದ ಹೊರದೊಬ್ಬುವ ಮಕ್ಕಳ ನಡುವೆ ಆಶ್ರಮದೊಳಗಿರುವ ಅನಾಥರು ನೀಡುವ ಕಿರುಕುಳವನ್ನು ಹಾಗೂ ಕೆಲವು ಸ್ವಾರ್ಥ ಮನಸ್ಸುಗಳು ನೀಡುತ್ತಿರುವ ನಿಂದೆ, ಅವಮಾನ, ಹೊಡೆತ ತಿಂದು ಕೂಡ ಎಲ್ಲವನ್ನೂ ಸಹಿಸಿಕೊಂಡು ಅನಾಥರ ಸೇವೆ ಮಾಡುತ್ತಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಾಗರಾಜ ನಾಯ್ಕರ ಸೇವೆ ನಿಜಕ್ಕೂ ಮಾನವೀಯ ಸಂಬಂಧಕ್ಕೊಂದು ಅರ್ಥ ನೀಡುತ್ತಿದೆ.
ಆಶ್ರಮದಲ್ಲಿ ಎಂಡೋ ಪೀಡಿತರು ಹಾಗೂ ವಿಕಲಚೇತನರಾದಿಯಾಗಿ ಎಲ್ಲಾ ರೀತಿಯ ಅನಾರೋಗ್ಯ ಪೀಡಿತರು ಆಶ್ರಯಪಡೆದಿದ್ದಾರೆ. ಇವರಲ್ಲಿ ಆನೇಕರು ಕೈಕಾಲಿಗಾದ ಗಾಯಕ್ಕೆ ಸರಿಯಾದ ಚಿಕಿತ್ಸೆ ಸಿಗದೇ ಕೊಳೆತು ಹುಳುವಾಗಿ ನಾರುತ್ತಿರುವವರನ್ನು ಸಹ ಆಶ್ರಮಕ್ಕೆ ಕರೆತಂದು ಕಿಂಚಿತ್ತೂ ಆಸಹ್ಯ ಪಟ್ಟುಕೊಳ್ಳದೇ ಸ್ವಚ್ಛಗೊಳಿಸಿ ಆಶ್ರಮದಲ್ಲಿ ಆಸರೆ ನೀಡಿದ ನಾಗರಾಜ ನಾಯ್ಕರ ಕೆಲಸಕ್ಕೆ ಎಷ್ಟು ಪ್ರೋತ್ಸಾಹ ನೀಡಿದರೂ ಸಾಲದು. ಇದಲ್ಲದೆ ಅವರ ಕುಟುಂಬಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದು ಇಲ್ಲಿಯವರೆಗೆ ನೂರಾರು ಜನರನ್ನು ಅವರ ಕುಟುಂಬಕ್ಕೆ ಸೇರಿಸಿದ್ದಾರೆ. ಇನ್ನು ಅನಾಥ ಸ್ಥಿತಿಯಲ್ಲಿ ನಿಧನರಾದವರನ್ನು ಸ್ವಂತ ಮಗನ ಸ್ಥಾನದಲ್ಲಿ ನಿಂತು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುತ್ತಾರೆ.
*ಜನರಿಂದ ಬೇಡಿ ಆನಾಥರ ಸಾಕುತ್ತಿರುವ ನಾಗರಾಜ ನಾಯ್ಕ*
ಆಶ್ರಮವಾಸಿಗಳ ಬೆಳಗ್ಗಿನ ತಿಂಡಿ, ಎರಡೊತ್ತಿನ ಊಟ, ಸಂಜೆಯ ತಿಂಡಿ ಚಹಾ ಸೇರಿ ಪ್ರತಿ ತಿಂಗಳು 4.50 ಲಕ್ಷದಿಂದ 5 ಲಕ್ಷ ರು. ಖರ್ಚಾಗುತ್ತಿದ್ದು ಆಗಾಗ ದಾನಿಗಳು ನೀಡುವ ಅಲ್ಪಸ್ವಲ್ಪ ಸಹಾಯ ಬಿಟ್ಟರೆ ಉಳಿದಂತೆ ನಿತ್ಯ ಒಂದೊಂದು ಊರು ತಿರುಗಿ ಜನರು ನೀಡಿದ ಅಕ್ಕಿ ಇನ್ನಿತರ ವಸ್ತುಗಳಿಂದ ಹೇಗೋ ದಿನದೂಡುತ್ತಿದ್ದಾರೆ. ಆಶ್ರಮ ನಡೆಸಲು ಬೇಕಾದ ಸಂಪನ್ಮೂಲ ಕ್ರೋಢಿಕರಿಸುವುದರಲ್ಲೇ ಕಾಲ ಕಳೆಯುವಂತಾಗಿದೆ ಇವರ ಪರೀಸ್ಥಿತಿ.
ಮನೆ ನಡೆಸುವುದಕ್ಕೆ ಹೆಣಗಾಡುತ್ತಿರುವ ಇವತ್ತಿನ ಸನ್ನಿವೇಶದ ನಡುವೆ ನೂರಾರು ಜನರನ್ನು ಪ್ರತಿ ದಿನ ಹೊಟ್ಟೆ ಹೊರೆಯುವುದೆಂದರೆ ಸುಲಭ ಸಾಧ್ಯನಾ. ಇದುವರೆಗೆ ಸರಕಾರ ಹಾಗು ಕಾರ್ಪೋರೇಟ್ ಕಂಪನಿಗಳಿಂದ ಯಾವುದೇ ಸಹಕಾರ ದೊರೆತಿಲ್ಲ. ಒಡಹುಟ್ಟಿದವರು ಮಾಡಬೇಕಾದ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ ನಾಯ್ಕರ ಮನಕಲಕುವ ಕಾರ್ಯಕ್ಕೆ ಸರಕಾರ ಹಾಗು ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿದರೆ ಇವರ ಸೇವೆಗೆ ಇನ್ನಷ್ಟು ಭಲಬರುತ್ತದೆ.
*ಸಾಲ ಮಾಡಿ ಆಶ್ರಮ ಕಟ್ಟಿದ ನಾಗರಾಜ ನಾಯ್ಕರು*
ತಾಲೂಕಿನ ಮುಗದೂರಿನಲ್ಲಿ ಜಾಗ ಖರೀದಿಸಿ ಅನಾಥಾಶ್ರಮವನ್ನು ಅವರಿವರ ಬಳಿ ಸಾಲ ಮಾಡಿ ಕಟ್ಟಿದ್ದಾರೆ. ಇನ್ನು ಇವರ ಈ ಮಾನವೀಯ ಸೇವೆಯನ್ನು ಸಹಿಸದ ಕೆಲವು ಕೊಳಕು ಮನಸ್ಸುಗಳು ಒಂದೆಡೆಯಾದರೆ. ಇವರ ಸೇವಾ ಕಾರ್ಯದ ಬಗ್ಗೆ ಅಪಪ್ರಚಾರ ಮಾಡುವವರು ಹಾಗೂ ಸಂಚು ಮಾಡುವವರು ಇವರ ಸೇವೆಗೆ ಸವಾಲೊಡ್ಡುತ್ತಿದ್ದಾರೆ. ನಿತ್ಯ ನಿಂದೆ, ಅವಮಾನ ಸಹಿಸಿಕೊಳ್ಳುತ್ತಿದ್ದಾರೆ. ಕೆಲವೊಬ್ಬರು ದೈಹಿಕ ಹಲ್ಲೆ ಕೂಡ ನಡೆಸಿದ್ದಾರೆ. ಇದ್ಯಾವುದಕ್ಕೂ ಜಗ್ಗದ ನಾಗರಾಜ ನಾಯ್ಕರು ಸೇವೆಯಲ್ಲೆ ಆನಂದವನ್ನೂ ನೋಡುತ್ತಿದ್ದಾರೆ.
ಯಾವುದೇ ಹಣಕಾಸಿನ ನೆರವಿಲ್ಲದೇ ಮಾನವೀಯ ಮೌಲ್ಯದ ಮೇಲೆ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಮಾನವೀಯ ಕೆಲಸಕ್ಕೆ ಸರಕಾರ ಸಮಾಜ ಹಾಗು ಉಳ್ಳವರು ಧನ ಸಹಾಯ ಮಾಡಿದರೆ ನೂರಾರು ಜನ ಅನಾಥರು, ವೃದ್ಧರು ಹಾಗು ಆಸಹಾಯಕರಿಗೆ ಆಶ್ರಯ ನೀಡಿದಂತಾಗುತ್ತದೆ.
ಪ್ರತಿ ದಿನ 76 ಜನ ಆಶ್ರಮವಾಸಿಗಳು ಹಾಗು ಕೆಲಸಗಾರರು ಸೇರಿ 80-85 ಜನರನ್ನು ನಿರ್ವಹಣೆ ಮಾಡಲು ಹೆಣಗಾಡುತ್ತಿರುವ ನಾಗರಾಜ ನಾಯ್ಕರು ಆಶ್ರಮ ಕಟ್ಟಲು ಮಾಡಿದ ಸಾಲವನ್ನು ತೀರಿಸಲು ಪರದಾಡುತ್ತಿದ್ದಾರೆ. ಎಷ್ಟೇ ಕಷ್ಟವಿದ್ದರೂ ಸಹ ಅನಾಥರ ಸೇವೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಅಲ್ಲಿ ಇಲ್ಲಿ ಬೇಡಿಯಾದರೂ ಹೇಗೋ ಆಶ್ರಮ ನಡೆಸುತ್ತಿದ್ದು, ದಿನ ಕಳೆದಂತೆ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದ್ದು, ಸಾಕಷ್ಟು ದುಂದುವೆಚ್ಚ ಮಾಡುವ ಸರಕಾರಗಳು ಇಂತಹ ಅನಾಥರ ಮನೆಯಾಗಿ ಕೆಲಸ ಮಾಡುತ್ತಿರುವ ಪುನೀತ್ ರಾಜಕುಮಾರ್ ಅನಾಥಾಶ್ರಮಕ್ಕೆ ನೆರವು ನೀಡಬೇಕಿದೆ.
*ಪತಿಗೆ ಸಾಥ್ ನೀಡುತ್ತಿರುವ ಪತ್ನಿ*
ತಾನು ಅನುಭವಿಸಿದ ಅನಾಥ ಪ್ರಜ್ಞೆ, ಯಾರಿಗೂ ಕಾಡಬಾರದು ಎಂದು ದೃಢವಾಗಿ ನಿಶ್ಚಯಿಸಿದ ನಾಗರಾಜ ನಾಯ್ಕ ಅನಾಥಾಶ್ರಮ ಕಟ್ಟಿ ಅಸಹಾಯಕರ ಸೇವೆ ಮಾಡುತ್ತಿದ್ದಾರೆ. ಇವರ ದಣಿವರಿಯದ ಕಾಯಕಕ್ಕೆ ಪತ್ನಿ ಮಮತಾ ನಾಯ್ಕ ಅವರು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ. ಆಶ್ರಮದ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಮತಾ ನಾಯ್ಕರ ಕಾರ್ಯ ಸಹ ಮೆಚ್ಚುವಂತದ್ದು. ಓರ್ವ ಹೆಣ್ಣಾಗಿ ಸಂಸಾರದ ಜಂಜಾಟದ ನಡುವೆ ಅನಾಥರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಮತಾ ನಾಯ್ಕರ ಕೆಲಸ ಕೂಡ ಶ್ಲಾಘನೀಯವಾಗಿದೆ.
“ರಾಮದಾಸ್ ಕಾನಡೆ ಸಿರಸಿ ಇವರ ನೇತೃತ್ವದ ಪ್ರತಿಷ್ಠಿತ ಸಪ್ತಮುಖಿ ಪತ್ರಿಕೆ, ಲೋಕೇಶ್ ಮೂರ್ತಿ ಬೆಂಗಳೂರು ಇವರ ಕ್ರೈಂ ಸ್ಪೋಟ, ಕ್ರೈಮ್ ನ್ಯೂಸ್ ಅಂತಹ ಹಲವಾರು ವಾರ ಪತ್ರಿಕೆಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ನಾಗರಾಜ ನಾಯ್ಕ ಅವರು ಇಂತಹ ಒಂದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯೇ ಸರಿ. ಅವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಲಿ” ಭಾಸ್ಕರ ನಾಯ್ಕ, ಸಂಪಾದಕರು ಟೈಮ್ಸ್ ಆಫ್ ಕೆನರಾ
ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.
PUNITH RAJKUMAR ASHRAYADHAMA ANATHASHRAMA SEVA SAMITI
A/C NO : 40918142470
IFSC CODE : SBIN0040131
BANK NAME : STATE BANK OF INDIA
BRANCH : SIDDAPUR
UPI ID : 9481389187@ybl
*GOOGLE PAY & PHONE PAY :*
*9481389187*
ಹೆಚ್ಚಿನ ಮಾಹಿತಿಗಾಗಿ
ಡಾ. ನಾಗರಾಜ ನಾಯ್ಕ
ಮುಖ್ಯಸ್ಥರು
ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ದೇವಸ್ಥಳ, ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) – 581355
ಮೊ. 9481389187, 8073197439 ಸಂಪರ್ಕಿಸಿ.




