ಸ್ಥಳೀಯ ರಂಗಭೂಮಿ ಕಲಾವಿದರಿಗೆ ಪತ್ರಕರ್ತ ಭಾಸ್ಕರ ನಾಯ್ಕ ರಚನೆ- ನಿರ್ದೇಶನದ ನಾಟಕ ನೀಡಿದೆ ಹೊಸ ಉತ್ಸಾಹ
ಭಟ್ಕಳ: ತಾಲೂಕಿನಲ್ಲಿ ಜಾತ್ರಾ ಸಮಯ ಹೊರತುಪಡಿಸಿ ನಾಟಕಗಳು ತೀರಾ ಕಡಿಮೆ ಎನ್ನುವ ಹೊತ್ತಿಗೆ ಜನವರಿ 27 ರಂದು ಸೋಡಿಗದ್ದೆ ಜಾತ್ರಾ ಮಹೋತ್ಸವದ ಪ್ರಯುಕ್ತ ಹಡೀನ್ ಗ್ರಾಮದ ವ್ರತ್ತಿಯಲ್ಲಿ ಪತ್ರಕರ್ತ ಭಾಸ್ಕರ ನಾಯ್ಕ ಅವರ ರಚನೆ – ನಿರ್ದೇಶನದ “ದೈವ ಸಂಕಲ್ಪ” ಎಂಬ ನಾಟಕವು ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನಗೊಂಡು
ರಂಗಭೂಮಿ ಮತ್ತು ಸ್ಥಳೀಯ ಕಲಾವಿದರಿಗೆ ಹೊಸ ಉತ್ಸಾಹ ತುಂಬಿದಂತಾಗಿದೆ.
ತಾಲೂಕಿನಲ್ಲಿ ರಂಗಭೂಮಿ ನಾಟಕಗಳು ನಿಧಾನವಾಗಿ ಆಸಕ್ತಿ ಕಳೆಗುಂದುತ್ತಿದ್ದು, ಸ್ಥಳೀಯ ಕಲಾವಿದರಿಗೆ ಸಮರ್ಪಕ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಹೊತ್ತಿಗೆ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ದೈವ ಸಂಕಲ್ಪ – ಮಾಯಾ ಮೋಹಿನಿ’ ನಾಟಕವೂ ನಾಟಕ ಪ್ರೇಮಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಸ್ಥಳೀಯ ಹಡೀನ್ ನಿವಾಸಿಯಾದ ವ್ರತ್ತಿಯಲ್ಲಿ ಪತ್ರಕರ್ತ ಆಗಿರುವ ಭಾಸ್ಕರ ನಾಯ್ಕ ಅವರ 17 ನೇ ನಾಟಕ ಈ ದೈವ ಸಂಕಲ್ಪ ಆಗಿರುವುದು ಇನ್ನೊಂದು ಇತಿಹಾಸವಾಗಿದೆ. ವಿಶೇಷ ಎಂದರೆ ನಮ್ಮಲ್ಲಿನ ಸ್ಥಳೀಯ ದೈವ, ದೇವರ ಕಥೆಯನ್ನೇ ಆಧರಿಸಿ ಜನರ ಮನಸ್ಸಿಗೆ ಇಷ್ಟವಾಗುವಂತಹ ಭಕ್ತಿ, ಶಕ್ತಿಯ ಜೊತೆಗೆ ಧರ್ಮ ಸ್ಥಾಪನೆಯ ಕಥೆಯನ್ನು ರಚಿಸಿದ ಭಾಸ್ಕರ ನಾಯ್ಕ ಅವರು ಭಟ್ಕಳ ತಾಲೂಕಿನಲ್ಲಿ ಈಗಾಗಲೇ ನಾಟಕ ರಚನೆಯಲ್ಲಿ ಎತ್ತಿದ ಕೈ.
ಅವರ ಒತ್ತಡದ ಕೆಲಸ- ದೈನಂದಿನ ಜೀವನದ ನಡುವೆ ಸಮಯ ನಿಗದಿಪಡಿಸಿಕೊಂಡು ಅದ್ಬುತವಾಗಿ ಈ ಕಥಾಹಂದರ ಸ್ಥಳೀಯ ಹಾಗೂ ಪರ ಊರಿನ ಜನರ ಮನಸೋರೆಗೊಳಿಸಿದಂತು ಸತ್ಯ. ಈ ಕಥೆಯ ನಾಟಕದ ಕುರಿತಾಗಿ 2 ತಿಂಗಳ ಮುಂಚಿತವಾಗಿ ಪ್ರಚಾರವನ್ನು ಆರಂಭಿಸಿದ ನಾಟಕದ ನಿರ್ದೇಶಕ ಭಾಸ್ಕರ ನಾಯ್ಕ ಹಾಗೂ ಅವರ ಕಲಾತಂಡದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಸಿದಂತು ಸತ್ಯ. ಪ್ರೇಕ್ಷಕರ ನಿರೀಕ್ಷೆ ಕೂತುಹಲಕ್ಕೆ ತಕ್ಕಂತೆ ನಾಟಕವೂ ಜನವರಿ 27 ರಂದು ರಾತ್ರಿ 10 ಗಂಟೆ ಆರಂಭಗೊಂಡು ಮುಂಜಾನ 3 ಗಂಟೆಯ ತನಕ ಸತತ ಮೂರೂವರೆ ಗಂಟೆಗಳ ಕಾಲ ಎಲ್ಲರನ್ನು ಕಥೆಯೊಳಗೆ ಇರಿಸಿಕೊಂಡಿರುವುದು ಕಥೆಯ ಜೊತೆಗೆ ಕಥೆಯಲ್ಲಿ ಆಯಾ ಪಾತ್ರದಲ್ಲಿ ನಟಿಸಿದ ಕಲಾವಿದವರಿಗೆ ಸಲ್ಲಬೇಕು.
ಕಥೆಯ ಸ್ರಷ್ಟಿ ಹಾಗೂ ಪ್ರೇರಣೆ ಎಲ್ಲಿ.?
ಪತ್ರಕರ್ತ ಹಾಗೂ ಈ ದೈವ ಸಂಕಲ್ಪ ನಾಟಕ ನಿರ್ದೇಶಕ ಭಾಸ್ಕರ ನಾಯ್ಕ ಅವರು ಸೋಡಿಗದ್ದೆಯ ಸ್ಥಳೀಯ ನಿವಾಸಿ ಹಾಗೂ ಶ್ರೀ ಸೋಡಿಗದ್ದೆ ಮಹಾಸತಿ ದೇವಿಯ ದೊಡ್ಡ ಭಕ್ತರು ಆಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷದ ನವರಾತ್ರಿಯ ಸಮಯದಲ್ಲಿ ದೇವಸ್ಥಾನದಲ್ಲಿ ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ವೇಳೆ ಭಾಸ್ಕರ ನಾಯ್ಕ ಅವರಿಗೆ ಜಟಗೇಶ್ವರ ದೈವದ ಕಥೆಯ ನಾಟಕ ಮಾಡು ಎನ್ನುವ ಒಂದು ಸೂಕ್ಷ್ಮ ಪ್ರೇರಣೆಯೊಂದು ಬಂದಿದ್ದು ಅಲ್ಲಿಂದ ಸತತ 3 ತಿಂಗಳು ತಮ್ಮ ಉಳಿದ ಕೆಲಸ ಕಾರ್ಯಗಳ ಜೊತೆಗೆ ಹಗಲಿರುಳು ಜಟಿಗೇಶ್ವರ ದೈವದ ಕಥೆಯನ್ನು ರಚಿಸಿ ನಾಟಕದ ಸಂಭಾಷಣೆ, ಚಿತ್ರಕಥೆ, ಸಹಿತ ದೈವ ಸಂಕಲ್ಪ ನಾಟಕದ ಶೀರ್ಷಿಕೆ ಗೀತ ಸಾಹಿತ್ಯವನ್ನು ಸಹ ರಚಿಸಿದ್ದಾರೆ. ಈ ಗೀತೆಗೆ ಸಂಗೀತವನ್ನು ವಿಘ್ನೇಶ ಆಚಾರ್ಯ ಚೌಥನಿ ನೀಡಿದ್ದು ಬಹುಭಾರಿ ಕೇಳಬೇಕೆನ್ನುವ ಗೀತೆಯಾಗಿದೆ. ನಾಟಕಕ್ಕೆ ಪವನ ನಾಯ್ಕ ಸರ್ಪನಕಟ್ಟೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ತದನಂತರದಲ್ಲಿ ನಾಟಕದ ಪ್ರಚಾರ ಮತ್ತು ದೈವ ಸಂಕಲ್ಪದ ಕಥೆಗೆ ತಕ್ಕನಾದ ಪೋಸ್ಟರನ್ನು ವಿಘ್ನೇಶ ಆಚಾರ್ಯ ಚೌಥನಿ ಅವರು ರಚಿಸಿದ್ದು ನಾಟಕದ ನೋಡಬೇಕೆನ್ನುವ ಪ್ರೇಕ್ಷಕರಿಗೆ ಇನ್ನಷ್ಟು ಕೂತೂಹಲ ಹೆಚ್ಚಾಯಿತು.
ನಾಟಕದಲ್ಲಿ ಭಾಸ್ಕರ ನಾಯ್ಕ ಸಹಿತ ಹಡೀನ್, ಸೋಡಿಗದ್ದೆ ಹಾಗೂ ಅಕ್ಕಪಕ್ಕದವರು ಸೇರಿದಂತೆ ವಿವಿಧ ಭಾಗಗಳ 40 ಕ್ಕೂ ಅಧಿಕ ಅನುಭವಿ ಹಾಗೂ ಉದಯೋನ್ಮುಖ ಕಲಾವಿದರ ಸಹಭಾಗಿತ್ವದಲ್ಲಿ ಸಿದ್ಧಗೊಂಡ ಈ ನಾಟಕ, ಯಾವುದೇ ರೆಕಾರ್ಡಿಂಗ್ ವೈಸ್ ಬಳಸದೇ
ನೈಜ ಧ್ವನಿಯಲ್ಲಿ ಕಥೆಯ ವಿವರದೊಂದಿಗೆ
ಪ್ರದರ್ಶನಗೊಂಡಿದ್ದು, ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ವೃತ್ತಿಪರ ನಾಟಕ ಮಂಡಳಿಗಳಂತೆ ನುರಿತ ತಾಂತ್ರಿಕತೆ, ಅಭಿನಯ ಹಾಗೂ ಕಥಾವಸ್ತುವಿನ ಸಮ್ಮಿಲನವೇ ಪ್ರಮುಖ ಬಲವಾಗಿದೆ. ಈ ನಾಟಕದ ವೇದಿಕೆಯನ್ನು ನ್ಯಾಷನಲ್ ಶ್ಯಾಮಿಯಾನಾ ಮಾಲೀಕತ್ವದ ನಾಗರಾಜ ನಾಯ್ಕ ಪುರವರ್ಗ ಸಿದ್ದಪಡಿಸಿದರೆ ಕಣ್ಣಿಗೆ ಕಟ್ಟಿಕೊಡುವಂತಹ ನಾಟಕ ಪರದೆಯೆ ಚಿತ್ರಣದ ದ್ರಶ್ಯವನ್ನು ಎಲ್.ಇ.ಡಿ. ಪರದೆ ಬಳಸಿದ ನಾಗೇಶ ನಾಯ್ಕ ಗೊರಟೆ ಅವರು ತಯಾರಿಸಿದ್ದರು. ಇನ್ನು ಧ್ವನಿ ಮತ್ತು ಬೆಳಕು- ಮಣಿಕಂಠ ನಾಯ್ಕ ಬೆಳಕೆ ಹಾಗೂ ನಾಟಕದ ಎಲ್ಲಾ
ಕಲಾವಿದರಿಗೆ ಕಿರಣ ಆಚಾರ್ಯ ಬಸ್ರೂರು ಅದ್ಬುತವಾಗಿ ಕಲಾವಿದರನ್ನು ವೇದಿಕೆಯಲ್ಲಿ ನೋಡುವಂತೆ ಮೇಕಪ್ ಮಾಡಿದ್ದಾರೆ.
ದೈವ ಸಂಕಲ್ಪದ ನಾಟಕದ ಕಲಾವಿದರ ಬಹುದೊಡ್ಡ ಬಳಗ
ನಿರ್ದೇಶಕ ಭಾಸ್ಕರ ನಾಯ್ಕ ಹಡೀನ್, ಶ್ರೀನಿವಾಸ ನಾಯ್ಕ ಹಡೀನ್, ಸುರೇಶ ನಾಯ್ಕ ಬಾಳೆಹಿತ್ಲು,
ಲೋಕೇಶ್ ನಾಯ್ಕ ಕವೂರು, ಲಕ್ಷ್ಮೀನಾರಾಯಣ ನಾಯ್ಕ ಕೋಣೆಮನೆ, ಉಮೇಶ ನಾಯ್ಕ ಸರ್ಪನಕಟ್ಟೆ, ಸೀತಾರಾಮ ನಾಯ್ಕ ಕೋಣೆಮನೆ, ದೇವರಾಜ ನಾಯ್ಕ ಹಡೀನ, ಪ್ರಸಾದ ಭಟ್ಕಳ, ಮಾಸ್ತಿ ಜೆ ನಾಯ್ಕ ಹಡೀನ್, ಪ್ರದೀಪ ನಾಯ್ಕ ಪುರವರ್ಗ, ಚಂದ್ರಕಾಂತ ನಾಯ್ಕ ಸರ್ಪನಕಟ್ಟೆ, ಮಹೇಶ ಆಚಾರ್ಯ ಸರ್ಪನಕಟ್ಟೆ, ಮಹೇಶ ನಾಯ್ಕ ಪುರವರ್ಗ, ಮಹೇಶ ಮೊಗೇರ ಬೆಳ್ನಿ, ಶರತ್ ನಾಯ್ಕ, ನರಿಮಳಗಿ
ಜಗದೀಶ ನಾಯ್ಕ ಹಡೀನ, ಮಾದೇವ ನಾಯ್ಕ ಎಳ್ಮುಡಿ, ಗಣೇಶ ನಾಯ್ಕ ಕುಂಜಿಹೊಂಡ,
ಪ್ರಸಾದ್ ಆಚಾರ್ಯ ಚೌತನಿ, ದಿನಕರ ಮೊಗೇರ,
ತಿಮ್ಮಪ್ಪ ನಾಯ್ಕ, ಲೋಕೇಶ್ ಮಾಣಿ ನಾಯ್ಕ, ಲೋಕೇಶ್ ನಾಯ್ಕ ಸಣ್ಣಹಿತ್ಲು, ವೆಂಕಟೇಶ ನಾಯ್ಕ ಕವೂರು, ಗಜಾನನ ನಾಯ್ಕ ಹಡೀನ್, ರವೀಶ ನಾಯ್ಕ
ಗಿರೀಶ ನಾಯ್ಕ, ಯಶವಂತ ನಾಯ್ಕ, ಸುಜಿತ್ ನಾಯ್ಕ, ವೆಂಕಿ ನಾಯ್ಕ, ಅಜಯ ನಾಯ್ಕ, ಮಾಸ್ಟರ್ ಅನ್ವಿತ್, ಕುಮಾರಿ ಅನುಶ್ರೀ ಅಭಿನಯಿಸಿದ್ದರು.
ಅದ್ವುತ ಪ್ರದರ್ಶನಕ್ಕೆ ಸಾಕ್ಷಿಯಾದ 4 ಸಾವಿರಕ್ಕು ಮೀರಿದ ಜನ –
ನಾಟಕದ ಮೊದಲ ಪ್ರಥಮ ಪ್ರದರ್ಶನ ರಾತ್ರಿ 3 ರವರೆಗೆ ನಡೆದಿದ್ದು ನಾಟಕದ ಮೇಲಿನ ಆಸಕ್ತ ಕಥೆಯ ಕೂತೂಹಲವು ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರು ಆಸಕ್ತಿಯಿಂದ ಕೊನೆಯ ಹಂತದ ತನಕ ಹಾಜರಿದ್ದು ವೀಕ್ಷಿಸಿದರು. ಇತ್ತೀಚಿನ ದಿನದಲ್ಲಿ ಸ್ಥಳೀಯ ನಾಟಕಕ್ಕೆ ಸಿಕ್ಕಂತಹ ಅದ್ವುತ ಪ್ರತಿಕ್ರಿಯೆಯನ್ನು ಈ ದೈವ ಸಂಕಲ್ಪ ನಾಟಕ ಮಾಡಿದೆ ಎನ್ನುವುದು ನಾಟಕದಲ್ಲಿ ನೆರೆದಿದ್ದ ಪ್ರೇಕ್ಷಕರ ಮಾತಾಗಿದೆ.
ಕರಾವಳಿಯ ದೈವಗಣಗಳ ಶಕ್ತಿ ಹಿನ್ನೆಲೆಯ ಪರಿಚಯದ ಕಥಾವಸ್ತು, ಊರಿನ ಜಮೀನ್ದಾರರ ದಬ್ಬಾಳಿಕೆ, ಊರಿನ ಪ್ರಮುಖದ ನಡುವಿನ ನಾಯಕರ ತಿಕ್ಕಾಟ, ಭೂಮಿಗೆ ದೈವಗಳ ಪ್ರತಿಷ್ಠಾಪನೆಯ ಹಿನ್ನೆಲೆ, ದೈವದ ಅನುಷ್ಠಾನಕ್ಕೆ ಗ್ರಾಮಸ್ಥರ ಒಗ್ಗಟ್ಟು ಹಾಗೂ
ಸುಂದರ ಹಾಸ್ಯ ಜೊತೆಗೆ ನಾಟಕ ಪ್ರೇಕ್ಷಕರನ್ನು ರಂಜಿಸಿತು. ನೈಜತೆಯುಳ್ಳ ಸಂಭಾಷಣೆ, ಪರಿಣಾಮಕಾರಿ ಸಂಗೀತ ಹಾಗೂ ಧ್ವನಿ ಬೆಳಕಿನ ಸಂಯೋಜನೆ ಹಾಗೂ ಇಲೆಕ್ಟ್ರಾನಿಕ್ ಸ್ಕ್ರೀನ್‌ನ ಸಮರ್ಪಕ ಬಳಕೆ ನಾಟಕಕ್ಕೆ ವಿಶೇಷ ಕಳೆ ನೀಡಿತು.
ನಾಟಕವನ್ನು ರಚಿಸಿ ನಿರ್ದೇಶಿಸಿದ ಪತ್ರಕರ್ತ ಭಾಸ್ಕರ ನಾಯ್ಕ ಅವರು ನಾಲ್ಕು ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಪರಿ ಪ್ರೇಕ್ಷಕರು ಬೆಕ್ಕಸಗೊಂಡರು.
‘ನಟ ರಾಕ್ಷಸ’ ಎಂಬಂತೆ ಭಾಸ್ಕರ ನಾಯ್ಕ ಅವರು ನಟನಾ ಹಸಿವು ವೇದಿಕೆಯಲ್ಲಿ ಅವರ ಅಭಿನಯ ಪ್ರೇಕ್ಷಕರನ್ನು ಸ್ಥಬ್ಧಗೊಳಿಸಿದರೆ, ಕೊನೆಯಲ್ಲಿ ಜಟ್ಟಿಗನ ಪಾತ್ರದಲ್ಲಿ ಸಾಕ್ಷಾತ್ ಜಟ್ಟಿಗನನ್ನೇ ಮೈಮೇಲೆ ಆಹ್ವಾನಿಸಿಕೊಂಡಂತೆ ಪರಕಾಯಪ್ರವೇಶದ ನಟನೆಯನ್ನು ಮೀರಿದಂತೆ ಜಟ್ಟಿಗ ದೈವದ ಸಾಕ್ಷಾತ್ಕಾರ
ನೋಡಿದಂತಾಯಿತು.
ಕಲಾತಂಡದ ಮತ್ತೊಬ್ಬ ಕಲಾವಿದ ಹಾಗೂ ಪತ್ರಕರ್ತ ಲೋಕೇಶ್ ನಾಯ್ಕ ಅವರು ಅರ್ಚಕರ ಪಾತ್ರದಲ್ಲಿ ಹಾಸ್ಯ–ನಗೆ ಚಟಾಕಿ ಮೂಲಕ ಮನರಂಜಿಸಿದರು. ಮಾಯಾಮೋಹಿನಿಯ ಪಾತ್ರದಲ್ಲಿ ನಟಿಸಿದ ಪುರುಷ ಪಾತ್ರದಾರಿ ನಾಟಕದುದ್ದಕ್ಕೂ ಮಹಿಳೆಯೇ ನಟಿಸಿದಂತೆ ತಮ್ಮ ಪಾತ್ರ ಚಾಪು ಮೂಡಿಸುವಲ್ಲಿ ಯಶಸ್ವಿಯಾದರೆ ಸೇವಂತಿ ಹಾಗೂ ಪಾರ್ವತಿ ದೇವಿ ಪಾತ್ರದಲ್ಲಿ ಅಭಿನಯಿಸಿದ ಯುವಕರು ಸಹ ಯುವತಿಯರೇ ನಾಚುವಂತೆ ನಟಿಸಿದ್ದಾರೆ. ಇನ್ನುಳಿದಂತೆ ಬಹುದೊಡ್ಡ ಕಲಾ ತಂಡದ ಕಲಾವಿದರು ಅವರ ಪಾತ್ರವನ್ನು ಜೀವಂತಗೊಳಿಸಿದರು.
ಸ್ಥಳೀಯ ಕಲಾವಿದರಿಗೆ ಸಿಕ್ಕ ಆತ್ಮವಿಶ್ವಾಸ –
ಇತ್ತೀಚಿನ ದಿನಗಳಲ್ಲಿ ತಿಂಗಳುಗಳ ಅಭ್ಯಾಸದ ಬಳಿಕವೂ ಪ್ರೇಕ್ಷಕರ ಕೊರತೆಯಿಂದ ನಿರಾಸೆಗೊಂಡಿದ್ದ ಸ್ಥಳೀಯ ಕಲಾವಿದರಿಗೆ ಈ ನಾಟಕ ಆತ್ಮವಿಶ್ವಾಸ ತುಂಬಿದೆ ಎಂದು ಕಲಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ದೈವ ಸಂಕಲ್ಪ ನಾಟಕವು
ಭಟ್ಕಳ ಸೇರಿದಂತೆ ಅಕ್ಕ ಪಕ್ಕದ ತಾಲ್ಲೂಕು ಜಿಲ್ಲೆಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಈ ನಾಟಕವನ್ನು ಮರುಪ್ರದರ್ಶನಗೊಳಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ.
ಶ್ರೀಕಾಂತ ನಾಯ್ಕ – ಮಾಜಿ ಸೈನಿಕರು, ಕಲಾ ಪ್ರೇಮಿ
ಪಕ್ಕದ ಜಿಲ್ಲೆಯ ಕೆಲವು ನಾಟಕಗಳನ್ನು ಮೀರಿಸುವಂತಹ ಯಾವುದೇ ತೊಡರಿಲ್ಲದೇ ಲೈವ್ ಆಗಿ ಮಾತಾಡುವ ಕಲಾವಿದರ ಮಾತಿನ ಜೊತೆಗೆ ಅದಕ್ಕೆ ಪೂರಕ ಅದ್ಭುತ ಟಚ್ ನೀಡುವ ಮ್ಯೂಸಿಕ್ ಸಂಯೋಜನೆ ಹಾಗೂ ಹಿಂಬದಿಯ ಇಲೆಕ್ಟ್ರಾನಿಕ್ ಸ್ಕ್ರೀನ್ ನ ಸೂಕ್ತ ಬಳಕೆ ಈ ನಾಟಕಕ್ಕೆ ಜೀವ ಕಳೆ ತರುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಭಟ್ಕಳದ ರಂಗಭೂಮಿ ಕಲಾವಿದರಿಗೆ ನವ ಚೈತನ್ಯ ನೀಡಿ ಹೊಸ ಇತಿಹಾಸ ಸೃಷ್ಟಿಸಲಿದೆ ಎನ್ನುವ ಆಶಾಭಾವನೆ ನನ್ನದು.
ಭಟ್ಕಳದ ರಂಗಭೂಮಿ ಕಲಾ ಪ್ರೇಮಿಗಳು ದಯವಿಟ್ಟು ಒಂದು ಬಾರಿ ಈ ನಾಟಕ ನೋಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದಲ್ಲಿ ನಮ್ಮ ರಂಗಭೂಮಿ ಕಲಾವಿದರಿಗೆ ಕೊಡುವ ಗೌರವ ದುಪ್ಪಟ್ಟಾಗಲಿದೆ.
ಭಾಸ್ಕರ ನಾಯ್ಕ – ದೈವ ಸಂಕಲ್ಪ ನಾಟಕ ನಿರ್ದೇಶಕ
‘ಸೋಡಿಗದ್ದೆ ಜಾತ್ರೆಯ ಪ್ರಯುಕ್ತ ನಡೆದ “ದೈವ ಸಂಕಲ್ಪ” ಅರ್ಥಾತ್ “ಮಾಯಾಮೋಹಿನಿ” ನಾಟಕ ಕಿಕ್ಕಿರಿದ ಜನಸಂದಣಿಯಲ್ಲಿ ಸೂಪರ್ ಹಿಟ್ ಪ್ರದರ್ಶನ ಕಂಡಿದೆ. ಪ್ರಥಮ ಪ್ರದರ್ಶನದಲ್ಲೇ ಅದ್ಭುತ ಯಶಸ್ಸು ದಾಖಲಿಸಿದೆ. ವಿಶೇಷ ತಂತ್ರಜ್ಞಾನ, ಅತ್ಯದ್ಬುತ ಕಥೆ, ನುರಿತ ಕಲಾವಿದರು, ಪ್ರತೀ ಸನ್ನಿವೇಶಕ್ಕೂ ಆವರಿಸುವ ಕುತೂಹಲ, ದೈವ ಮತ್ತು ದುಷ್ಟಶಕ್ತಿಗಳ ಹೋರಾಟ, ಹಾಸ್ಯದ ಕಚಗುಳಿ, ಮೈ ನವಿರೇಳಿಸುವ ಜಟ್ಟಿಗ ದೈವದ ಆವೇಶ, ಇನ್ನೂ ಹಲವಾರು ವಿಶೇಷತೆಗಳನ್ನು ಹೊಂದಿರುವ “ದೈವ ಸಂಕಲ್ಪ” ನಾಟಕ. ಇನ್ನು ಮುಂದಿನ ದಿನದಲ್ಲಿ ನಾಟಕಕ್ಕೆ ಅಗತ್ಯವಾದ ಕೆಲವು ಮಾರ್ಪಾಡುಗಳೊಂದಿಗೆ ಅತೀವ ಆತ್ಮವಿಶ್ವಾಸದಿಂದ ಪ್ರದರ್ಶನಕ್ಕೆ ಸಿದ್ಧವಾಗಿದೆ. ಭಟ್ಕಳ ಹಾಗೂ ಯಾವುದೇ ಭಾಗದಲ್ಲೂ ಕೂಡ ಪ್ರದರ್ಶನಕ್ಕೆ ಸಿದ್ಧರಿದ್ದೇವೆ. ನೋಡೋಣ ಯಾವ್ಯಾವ ಊರಿನಲ್ಲಿ ಪ್ರದರ್ಶನಕ್ಕೆ “ದೈವ ಸಂಕಲ್ಪ”ವಾಗಿದೆ ಎಂದು. ಸಂಪರ್ಕ 8073433219


