ಸರಕಾರದ ಪ್ರಮುಖ ಶಕ್ತಿ ಯೋಜನೆಗೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಿಂದ ಸಿಗದ ಪೂರಕ ಸಹಕಾರ
ಭಟ್ಕಳ: ಈಗಿನ ರಾಜ್ಯ ಸರಕಾರವು ಜನರಿಗೆ ನೀಡಿದ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಅದು ಸಾಕಾರಗೊಳ್ಳುವಂತೆ
ಮಾಡುತ್ತಿದ್ದರೆ ಇತ್ತ ಭಟ್ಕಳ- ಕುಮಟಾ ಕೆ.ಎಸ್.ಆರ್.ಟಿ.ಸಿ. ಬಸ್ ಘಟಕಗಳು
ಈ ನಿಟ್ಟಿನಲ್ಲಿ ಬಸ್ ಗಳ ಸಂಖ್ಯೆ ಏರಿಕೆಯನ್ನು ಮಾಡದೇ ಮತ್ತು ಅರ್ಧ ಗಂಟೆಗೊಂದು ಸಾಮಾನ್ಯ ಸಾರಿಗೆ ಬಸ್ ಬಿಡದ ಹಿನ್ನೆಲೆ ಸದ್ಯ ಭಟ್ಕಳ ಕುಮಟಾ ಭಾಗದ ವಿದ್ಯಾರ್ಥಿಗಳು, ಪ್ರಯಾಣಿಕರು ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.
ಸರ್ಕಾರದ ಮಹತ್ವಕಾಂಕ್ಷೀ ಯೋಜನೆಯಾದ ಶಕ್ತಿ ಯೋಜನೆಯನ್ನು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯನ್ನು ನಂಬಿ ಕೊಟ್ಟಿದೆ. ಆದರೆ ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡುವಲ್ಲಿ ಪದೇ ಪದೇ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಎಡವುತ್ತಿದೆ. ಕಾರಣ ಅವರಿಗೆ ಸರಕಾರದ ಯೋಜನೆಯೆಂದರೆ ತಾತ್ಸಾರವಾದಂತಾಗಿದೆ.
ಇಲ್ಲಿನ ಭಟ್ಕಳದಿಂದ ಕುಮಟಾದ ತನಕ ಹಾಗೂ ಕುಮಟಾದಿಂದ ಭಟ್ಕಳಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಈ ಸಾರಿಗೆ ಸಂಸ್ಥೆಯ ಬಸ್ ಗಳನ್ನೇ ನಂಬಿ ಸಮಯ ಹೊಂದಿಸಿಕೊಂಡು ತಮ್ಮ ಕೆಲಸ ಕಾರ್ಯಕ್ಕೆ ಬಸ್ ಗಾಗಿ ಕಾಯುತ್ತಾರೆ ಆದರೆ ಈ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯು ವಿದ್ಯಾರ್ಥಿಗಳನ್ನು ಮತ್ತು ಪ್ರಯಾಣಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದೆ ಮತ್ತು ಇದು ಭಟ್ಕಳ-ಕುಮಟಾ ಮಾರ್ಗದಲ್ಲಿ ಪ್ರತಿ ದಿನ ಕಾಣಸಿಗೋದು ಸರ್ವೇ ಸಾಮಾನ್ಯವಾಗಿದೆ.
ಭಟ್ಕಳದಿಂದ ಕುಮಟಾಕ್ಕೆ ಅಂದಾಜು 65 ಕಿ.ಮೀ. ಮಾರ್ಗದ ಸಾಮಾನ್ಯ ನಗರ ಸಾರಿಗೆ ಸೇವೆ ಆ ದೇವರಿಗೆ ಪ್ರೀತಿ. 65 ಕಿ.ಮೀ. ಪ್ರಯಾಣಿಸಲು ಕಡಿಮೆ ಎಂದರು ಎರಡುವರೆ ಗಂಟೆ ಬೇಕು ಏಕೆಂದರೆ ಕಾರಣಗಳು ಹತ್ತಾರು.
ಒಂದು ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ 100ಕ್ಕಿಂತಲೂ ಹೆಚ್ಚಾಗಿ ಇರುತ್ತದೆ. ಮತ್ತು ಮಾರ್ಗ ಮಧ್ಯದಲ್ಲಿ ಸಿಗುವ ಹೆಚ್ಚಿನ ಪ್ರವಾಸಿ ತಾಣಗಳು ಶಾಲಾ ಕಾಲೇಜುಗಳು, ಹೋಟೆಲ್ ಗಳು ಇರುವುದರಿಂದ ಜನಸಂಖ್ಯೆ ಹೆಚ್ಚಾಗಿಯೇ ಇರುತ್ತದೆ.
ಈ ಎಲ್ಲಾ ಅಂಶಗಳಾಧಾರದ ಮೇಲೆ ಬಸಗಳ ಸಂಖ್ಯೆಯನ್ನು ಹೆಚ್ಚು ಮಾಡುವುದು ಸಾಮಾನ್ಯವಾಗಿದೆ. ಕೆ.ಎಸ್.ಆರ್.ಟಿ.ಸಿ. ಸಾರಿಗೆ ಸಂಸ್ಥೆಗಳಿಗೆ ಪ್ರಯಾಣಿಕರೇ ದೇವರು ಅವರನ್ನು ಬಿಟ್ಟು ಇವರಿಗೆ ಆದಾಯವಿಲ್ಲ ಮತ್ತು ಅವರ ಸಂಚಾರಕ್ಕೆ ತೊಡಕಾಗದಂತೆ ನೋಡಿಕೊಳ್ಳುವ ಕೆಲಸ ಸಾರಿಗೆ ಸಂಸ್ಥೆಗಳದ್ದಾಗಿದೆ.
ಮುಖ್ಯ ಕಾರಣವೇಂದರೆ ಈ ಮಾರ್ಗದ (ಭಟ್ಕಳ-ಕುಮಟಾ) ಸಂಚಾರ ನಿಯಂತ್ರಣದ ಜವಾಬ್ದಾರಿ ಹೊಣೆಯನ್ನು ಕುಮಟಾ ಘಟಕ ಮತ್ತು ಭಟ್ಕಳ ಘಟಕ ಈ ಎರಡು ಘಟಕಗಳು ಹೊಂದಿದ್ದು ಸಮಸ್ಯೆ ಕೇಳಲು ಹೋದ ಪ್ರಯಾಣಿಕರಿಗೆ ಭಟ್ಕಳ ಘಟಕ ಮತ್ತು ಕುಮಟಾ ಘಟಕ ಅವರು ಇವರ ಮೇಲೆ ಇವರು ಅವರ ಮೇಲೆ ಕಾರಣ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಹೊರತು ಈ ಸಂಚಾರದ ಬಿಕ್ಕಟ್ಟಾದ ಹೆಚ್ಚಿನ ಬಸ್ ಸಂಚಾರವನ್ನು ಮಾತ್ರ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದು ಈ ಸಾರಿಗೆ ಸಂಸ್ಥೆಯ ಹಣೆಬರಹವಾಗಿದೆ.
ಕಾಲ ಹರಣದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು:
ಭಟ್ಕಳ-ಕುಮಟಾ ಮಾರ್ಗದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆ, ಹೆಚ್ಚಿನ ಪ್ರವಾಸಿ ತಾಣಗಳು ಶಾಲಾ ಕಾಲೇಜುಗಳು, ಹೋಟೆಲ್ ಗಳಿವೆ.
ಇನ್ನೇನು ಜೂನ್ ತಿಂಗಳಲ್ಲಿ ಶಾಲೆ ಕಾಲೇಜುಗಳು ಆರಂಭವಾಗಲಿದ್ದು, ಬಸ್ ಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ ಗಳ ಸಂಚಾರದತ್ತ ಅಧಿಕಾರಿಗಳು ಭವಿಷ್ಯದ ಯೋಚನೆ ಮಾಡದೇ ಆರಾಮವಾಗಿ ಕಾಲ ಹರಣ ಮಾಡುತ್ತಿದ್ದಾರೆ.
ಸಚಿವ ಮಂಕಾಳ ವೈದ್ಯರಿಂದ ಇಲಾಖೆ ಅಧಿಕಾರಿಗೆ ಖಡಕ ಎಚ್ಚರಿಕೆ :
ಕಳೆದ ಮೇ 13 ರಂದು ಸಚಿವ ಮಂಕಾಳ ವೈದ್ಯ ಅವರು ತ್ರೈಮಾಸಿಕ ಕೆ.ಡಿ.ಪಿ.ಯಲ್ಲಿ
ಕೆ.ಎಸ್.ಆರ್.ಟಿ.ಸಿ. ಭಟ್ಕಳದ ಘಟಕದ ಡಿಪೋ ಮ್ಯಾನೇಜರ್ ಅವರಿಗೆ ಖಡಕ ಸೂಚನೆಯ ಜೊತೆಗೆ ಬಸ್ ಗಳ ಹೆಚ್ಚಳ, ಬಸ್ ಸಂಚಾರ ಹೆಚ್ಚಳ ಮಾಡುವ ಕುರಿತು ಎಚ್ಚರಿಕೆ ನೀಡಿದ್ದ ಅವರು ಈ ಹಿಂದೆ ಭಟ್ಕಳ ಬಸ್ ಘಟಕಕ್ಕೆ ಬಸ್ ಇಲ್ಲ ಎಂದಿದಕ್ಕೆ ಬಸ್ ನೀಡಿದ್ದೆ. ಚಾಲಕರಿಲ್ಲ, ಕಂಡಕ್ಟರ್ ಎಂದಿದಕ್ಕೆ ಅವರನ್ನು ಸಹ ನೇಮಿಸಿದ್ದೆ.
“ಆದರೆ ಬಸ್ ಘಟಕದಿಂದ ಭಾನುವಾರ ಮತ್ತು ಶಾಲಾ ಕಾಲೇಜು ರಜೆ ದಿನ ಯಾಕೆ ಬಸ್ ಬೀಡುತ್ತಿಲ್ಲ. ಮತ್ತು ಹಳ್ಳಿಗಳಿಗೆ ಯಾಕೆ ಬಸ್ ಬಿಡುತ್ತಿಲ್ಲ” ಎಂದು ಭಟ್ಕಳ ಕೆ.ಎಸ್.ಆರ್.ಟಿ.ಸಿ. ಘಟಕದ ಮ್ಯಾನೇಜರ ಅವರಲ್ಲಿ ಪ್ರಶ್ನಿಸಿದರು.
ನಿಮ್ಮಂತಹ ಅಧಿಕಾರಿಗಳಿಂದ ನಾವು ಮತ್ತು ಸರಕಾರ ಜನರಿಗೆ ಏನು ಉತ್ತರ ನೀಡಬೇಕು ಎಂದು ತರಾಟೆಗೆ ತೆಗೆದುಕೊಂಡ ಸಚಿವ ವೈದ್ಯ ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ೨೦ ಜನ ಸ್ನೇಹಿ ಬಸ್ ನೀಡಿದ್ದೆ ಅದನ್ನು ಕುಮಟಾಗೆ ಮಾರಿಕೊಂಡಿದ್ದೀರಿ. ಹಳ್ಳಿಗಳಿಗೆ ಹೋಗುವ ಹೊಲ್ಟಿಂಗ್ ಬಸ ಯಾಕೆ ಬಿಡುತ್ತಿಲ್ಲ. ಅವೆಲ್ಲವು ಪುನಃ ಸಂಚರಿಸುವಂತೆ ಮಾಡಬೇಕೆಂದು ಸೂಚಿಸಿದರು.
ಹಾಗೂ ಇನ್ನು ಮುಂದೆ ಸಂಜೆ ೮ ಗಂಟೆಯಿಂದ ಭಟ್ಕಳದಿಂದ ಒಂದು ಬಸ್ ಹೊನ್ನಾವರದಿಂದ ಒಂದು ಬಸ್ ಸಂಚರಿಸಬೇಕು. ನಂತರ ಸಭೆಯಲ್ಲಿಯೇ ಜಿಲ್ಲಾ ಕೆ.ಎಸ್.ಆರ್.ಟಿ.ಸಿ. ಡಿ.ಸಿ. ಅವರಿಗೆ ದೂರವಾಣಿ ಕರೆ ಮೂಲಕ ಖಡಕ ಸೂಚನೆ ನೀಡಿದ್ದು ಬಸ್ ಬಿಡುವುದಾಗಿ ಸಭೆಯಲ್ಲಿ ಅಧಿಕಾರಿ ತಿಳಿಸಿದರು.
ಸಚಿವರ ಸೂಚನೆಗೂ ಜಗ್ಗದ ಅಧಿಕಾರಿಗಳು :
ಸಚಿವ ಮಂಕಾಳ ವೈದ್ಯ ಅವರು ಅನೇಕ ಬಾರಿ ಕುಂದುಕೊರತೆ ಸಭೆಗಳಲ್ಲಿ ಎಚ್ಚರಿಕೆ ನೀಡಿದರು ಸಮಸ್ಯೆಗೆ ಪರಿಹಾರ ಈವರೆಗೂ ಸಿಕ್ಕಿಲ್ಲ. ಇರುವ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವತ್ತ ಕೆ.ಎಸ್.ಆರ್.ಟಿ.ಸಿ. ಇಲಾಖೆಯ ಅಧಿಕಾರಿಗಳ ಕಾರ್ಯ ನಡೆಯುತ್ತಿದೆ.
ಒಂದೇ ಪರಿಹಾರ – ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ನಿರಾಳ :
ಇದಕ್ಕೆಲ್ಲ ಒಂದೇ ಒಂದು ಪರಿಹಾರವೆಂದರೆ “ಭಟ್ಕಳ ಘಟಕದಿಂದ ಭಟ್ಕಳ ಹೊನ್ನಾವರ ಮಾರ್ಗದ ಜವಾಬ್ದಾರಿ ಹೊತ್ತು ಕಾರ್ಯಾಚರಣೆ ನಡೆಸಿ ಬಸ್ ಬಿಡುವುದು ಹಾಗೂ ಕುಮಟಾ ಘಟಕದಿಂದ ಕುಮಟಾ ಹೊನ್ನಾವರ ಮಾರ್ಗದ ಜವಾಬ್ದಾರಿ ಹೊತ್ತು ಕಾರ್ಯಾಚರಣೆ ನಡೆಸಿ ಬಸ್ ಸಂಚಾರ ಹೆಚ್ಚಿಸುವುದಾಗಿದೆ. ಆಗ ನಿಜವಾದ ತಪ್ಪಿತಸ್ಥರು ಯಾರು ಎಂಬುದು ಸಿಕ್ಕಿ ಬೀಳುತ್ತಾರೆ ಹಾಗೂ ಪ್ರತಿ ಅರ್ಧ ಗಂಟೆಗೊಂದು ಸಾಮಾನ್ಯ ಸಾರಿಗೆ ಬಸ್ ಗಳು ಸಾರ್ವಜನಿಕರಿಗೆ ಸಿಗುವಂತಾಗುತ್ತದೆ. ಇದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕಾದ ಜವಾಬ್ದಾರಿ ಅವರದ್ದಾಗಿದೆ.
“ಪ್ರತಿದಿನ ನಾವು ದೂರದ ಹಳ್ಳಿಯಿಂದ ಬರುವುದು. ಕೆಲವೊಮ್ಮೆ ಗಂಟೆಗಟ್ಟಲೆ ಕಾದರೂ ಬಸ್ ಬರುವುದಿಲ್ಲ, ಬಸ್ ಬಂದರೂ ಫುಲ್ ರಶ್ ಇರುತ್ತದೆ. ಹೀಗಾಗಿ ಪ್ರಯಾಣ ಕಷ್ಟ. ಹಲವು ಸಲ ತಡವಾಗಿ ಕ್ಲಾಸ್ ಮಿಸ್ ಆಗಿದ್ದು ಇದೆ. ದಯವಿಟ್ಟು ಆದಷ್ಟು ಬಸ್ ಸೌಲಭ್ಯ ಒದಗಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ.”
–ಮಧುಮಿತಾ, ವಿದ್ಯಾರ್ಥಿನಿ
“ಸರಕಾರದ ಪ್ರಮುಖ ಶಕ್ತಿ ಯೋಜನೆಗೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಿಂದ ಸಿಗದ ಸರಿಯಾದ ರೀತಿಯ ಸಹಕಾರವು ಸಿಗುತ್ತಿಲ್ಲ. ಕಾರಣ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಪ್ರತಿ ನಿತ್ಯ ಕುಮಟಾದಿಂದ ಭಟ್ಕಳಕ್ಕೆ ಉದ್ಯೋಗಕ್ಕಾಗಿ ಬರುತ್ತೇವೆ. ಆದರೆ ಸಮಸ್ಯೆಗೆ ಸರಿಯಾಗಿ ಬಸ್ ಸಂಚಾರ ಆಗುತ್ತಿಲ್ಲ.”
– ಕಲಾವತಿ ನಾಯ್ಕ – ಖಾಸಗಿ ಸಂಸ್ಥೆ ಉದ್ಯೋಗಿ

