ಭಟ್ಕಳ: ಭಟ್ಕಳದ ಪ್ರತಿಷ್ಠಿತ ವೆಲ್ಫೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ (ಮೂಳೆರೋಗ) ವಿಭಾಗಕ್ಕೆ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಕಾದೀರ್ ಮೀರಾ ಪಟೇಲ್ ಅವರು ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಕಾದೀರ್ ಮೀರಾ ಪಟೇಲ್, “ವೆಲ್ಫೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವೈದ್ಯರನ್ನು ನೇಮಿಸುವ ಪ್ರಯತ್ನಗಳು ಬಹಳ ಹಿಂದಿನಿಂದಲೂ ನಡೆಯುತ್ತಿದ್ದವು. ಈಗ ಆ ಕನಸು ನನಸಾಗಿದೆ. ಡಾ. ಹನ್ನಾನ್ ಶೇಖ್ ಕಬೀರ್ ಅವರು ತಮ್ಮ ವೃತ್ತಿಯಲ್ಲಿ ನುರಿತ ತಜ್ಞರಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಎಲ್ಲರಿಗೂ ಆರೋಗ್ಯವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ,” ಎಂದರು.
ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಮೂಳೆರೋಗ ತಜ್ಞರ ತಂಡದ ಸದಸ್ಯರಾಗಿರುವ ಡಾ. ಹನ್ನಾನ್ ಶೇಖ್ ಕಬೀರ್, MBBS, D’Ortho, DNB (Ortho), MNAMS, FAGE, ಹಾಗೂ ಕೀಲು ಬದಲಿ ಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಸರ್ಜನ್ ಆಗಿದ್ದಾರೆ. ಇವರು ಭಟ್ಕಳದ ವೆಲ್ಫೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ಸೇವೆಯನ್ನು ನೀಡಲಿದ್ದಾರೆ.
ಭಟ್ಕಳ ಸರ್ಕಾರಿ ಆಸ್ಪತ್ರೆಯ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, “ಭಟ್ಕಳದಲ್ಲಿ ಆರ್ಥೋಪೆಡಿಕ್ ತಜ್ಞರ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಲಭ್ಯವಿರಲಿಲ್ಲ. ಈಗ ವೆಲ್ಫೇರ್ ಆಸ್ಪತ್ರೆಯಲ್ಲಿ ಈ ವಿಭಾಗ ಆರಂಭವಾಗಿರುವುದು ಸ್ಥಳೀಯರಿಗೆ ದೊಡ್ಡ ನೆರವಾಗಲಿದೆ,” ಎಂದರು.
ವೆಲ್ಫೇರ್ ಆಸ್ಪತ್ರೆಯ ದಂತ ವೈದ್ಯ ಡಾ. ಝಹೀರ್ ಕೋಲಾ, “ನಮ್ಮ ಆಸ್ಪತ್ರೆಯು ಸಮುದಾಯದ ಸೇವೆಗೆ ಸಮರ್ಪಿತವಾಗಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಡಾ. ಹನ್ನಾನ್ ಜೊತೆಗೆ, ಡಾ. ಸುಹಾಸ್ ಅವರು ಪೂರ್ಣಾವಧಿಯ ಫಿಜಿಷಿಯನ್ ಆಗಿ ಸೇವೆ ಸಲ್ಲಿಸಲಿದ್ದಾರೆ,” ಎಂದು ತಿಳಿಸಿದರು.
ವೆಲ್ಫೇರ್ ಆಸ್ಪತ್ರೆಯ ಈ ಹೊಸ ಆರ್ಥೋಪೆಡಿಕ್ ವಿಭಾಗವು ಆಧುನಿಕ ಸೌಲಭ್ಯಗಳೊಂದಿಗೆ ರೋಗಿಗಳಿಗೆ ಉನ್ನತ ದರ್ಜೆಯ ಚಿಕಿತ್ಸೆಯನ್ನು ಒದಗಿಸಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾದ ಸಲಾಹುದ್ದೀನ್ ಎಸ್.ಕೆ., ಮೌಲಾನ ಸೈಯ್ಯದ್ ಝುಬೇರ್, ಯೂನೂಸ್ ರುಕ್ನುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಭಟ್ಕಳ ವೆಲ್ಫೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವಿಭಾಗಕ್ಕೆ ಚಾಲನೆ
RELATED ARTICLES
