ಭಟ್ಕಳ: ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಇದರ ವತಿಯಿಂದ ಬೇಂಗ್ರೆಯ ಮಂಜುನಾಥ ಸಭಾಗ್ರಹದಲ್ಲಿ ಏರ್ಪಡಿಸಲಾಗಿದ್ದ ಕವಿ ನುಡಿ ಸಂಭ್ರಮ ಆವೃತ್ತಿ೪ ಹಾಗೂ ಎಚ್.ಎಸ್.ವಿ. ಕವಿ ನಮನ, ಜಿಲ್ಲಾಧ್ಯಕ್ಷೆ ಡಾ. ನೀವಿಯಾ ಗೋಮ್ಸ್ ಅವರ ಪದಗ್ರಹಣ ಮತ್ತು ಕನ್ನಡ ಸಾಧಕರಿಗೆ ಅಕ್ಷರ ನಾದ ಕರಾವಳಿ ರತ್ನ ಪ್ರಶಸ್ತಿ ವಿತರಣಾ ಸಮಾರಂಭವನ್ನು ಭಟ್ಕಳ-ಹೊನ್ನಾವರ ಭಾಗದ ಡೀನ್ ಫಾದರ್ ಲಾರೆನ್ಸ್ ಡಿಸಿಲ್ವ ಅವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕನ್ನಡದ ಬಗ್ಗೆ ಅತ್ಯಂತ ಹೆಮ್ಮೆ ಇರುವ ನಾವುಗಳು ಕನ್ನಡದ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಕನ್ನಡದ ಬೆಳವಣಿಗೆಗೆ ನಮ್ಮ ನಮ್ಮ ಕೊಡುಗೆಗಳನ್ನು ನೀಡುವುದು ಅತೀ ಮುಖ್ಯವಾಗಿದೆ ಎಂದ ಅವರು ಓರ್ವ ಅನ್ಯ ಭಾಷಿಕರಾದ ಶೃತಿ ಮಧುಸೂದನ್ ಅವರು ಕನ್ನಡದ ಬಗ್ಗೆ ಹೊಂದಿದ ಕಾಳಜಿ, ಅವರು ಕಟ್ಟಿ ಬೆಳೆಸಿದ ಸಂಸ್ಥೆ ತುಂಬಾ ಹೆಮ್ಮೆ ಪಡುವಂತಹದ್ದು ಎಂದರು. ಕನ್ನಡಕ್ಕೆ ಹಿಂದಿನಿಂದಲೂ ಕ್ರಿಶ್ಚಿಯನ್ ಮೆಶಿನರಿಗಳ ಕೊಡುಗೆ ಅಪಾರವಾದದ್ದು ಎಂದ ಅವರು ನಾವು ಕೂಡಾ ಆ ಬಗ್ಗೆ ಅತ್ಯಂತ ಕಾಳಜಿ ವಹಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಇದರ ಅಧ್ಯಕ್ಷೆ ಶೃತಿ ಮಧುಸೂದನ್ ವೇದಿಕೆಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೀವಿಯಾ ಗೋಮ್ಸ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ ಅವರು ಮಾತನಾಡಿ ಕನ್ನಡ ಮಣ್ಣಿನ ಗುಣಧರ್ಮ ಅತ್ಯಂತ ಎತ್ತರಕ್ಕೆ ಏರಿಸುವಂತದ್ದು. ಈ ಭಾಗದಲ್ಲಿ ಹುಟ್ಟಿದ ಖ್ಯಾತನಾಮರಾದ ಅನಂತನಾಗ್ ಹಾಗೂ ಶಂಕರ್‌ನಾಗ್ ಸೇರಿದಂತೆ ಇತರರನ್ನು ಸ್ಮರಿಸಿದ ಅವರು, ಅನೇಕ ಕವಿಗಳು, ಸಾಹಿತಿಗಳು ಗಣ್ಯರು ಈ ನೆಲದಿಂದ ಬಂದವರು ಎಂದು ಸ್ಮರಿಸಿದರು.
ಸಾಹಿತಿ ಶಂಭು ಹೆಗಡೆ ಮಾತನಾಡಿ ಅಕ್ಷರ ನಾದ ಸಂಸ್ಥೆಯ ಅಧ್ಯಕ್ಷರ ಕಾರ್ಯವನ್ನು ಶ್ಲಾಘಿಸುತ್ತಾ ಕನ್ನಡ ಮಾತನಾಡುವಾಗ ನಾವು ಆಂಗ್ಲ ಭಾಷೆಯನ್ನು ಬಳಸದಂತೆ ಜಾಗೃತೆ ವಹಿಸಬೇಕು ಎಂದ ಅವರು ಪುಸ್ತಕ ಪ್ರಕಾಶನದ ಕಾರ್ಯ ತುಂಬ ಕಷ್ಟದ ಕೆಲಸವಾಗಿದ್ದು ಸಂಘಟಕರ ಶ್ರಮ ಸಾರ್ಥಕವಾಗಿದೆ ಎಂದರು.
ಸೈಂಟ್ ಮಿಲಾಗ್ರಿಸ್ ಸೌಹಾರ್ಧ ಸಹಕಾರಿಯ ಅಧ್ಯಕ್ಷ ಜಾರ್ಜ ಫೆರ್ನಾಂಡೀಸ್ ಮಾತನಾಡಿ ತಮ್ಮ ಮಾತೃಭಾಷೆ ಕೊಂಕಣಿಯಾದರೂ ಸಹ ಕನ್ನಡ ಭಾಷೆಯಲ್ಲಿ ಅವರು ಸಾಹಿತ್ಯ ಕೃಷಿ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಜಿಲ್ಲೆ ಸಾಹಿತಿಗಳ ಜಿಲ್ಲೆಯಾಗಿದ್ದು ಇಲ್ಲಿ ನೂರಾರು ಪುಸ್ತಕಗಳನ್ನು ರಚಿಸಿದ ಅನೇಕರಿದ್ದಾರೆ. ಅಕ್ಷರ ನಾದ ಸಂಸ್ಥೆ ನಮ್ಮ ಉತ್ತರ ಕನ್ನಡದಲ್ಲಿಯೂ ಕನ್ನಡದ ಕಾರ್ಯ ಮಾಡಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪತ್ರಕರ್ತ ರಾಧಾಕೃಷ್ಣ ಭಟ್ಟ, ಸಾಹಿತಿ ಸವಿತಾ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಸಮಾಜ ಸೇವಕ ಗಣೇಶ ಶಿಲ್ಪಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಹತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಇದರ ವತಿಯಿಂದ ಹಲವಾರು ಸಾಧಕರಿಗೆ ಅಕ್ಷರ ನಾದ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ ಕಾರ್ಯನಿರ್ವಾಹಕಿ ಡಾ. ತಾರಾ ಸಂತೋಷ್ ಮೆರವಾಡೆ ಸ್ವಾಗತಿಸಿದರು. ನಂತರ ನಡೆದ ಕವಿಗೋಷ್ಟಿಯನ್ನು ಫೆಲಿಕ್ಸ್ ಫೆರ್ನಾಂಡೀಸ್ ನಿರ್ವಹಸಿದರು.
