ಅಭಿನಯ, ನಿರ್ದೇಶನ, ನಿರೂಪಣೆಯಲ್ಲಿ ಮಿಂಚಿದ ಶಿಕ್ಷಕ ನಾರಾಯಣ ನಾಯ್ಕರಿಗೆ ರಾಜ್ಯಮಟ್ಟದ ಗೌರವ
ಭಟ್ಕಳ: ವೃತ್ತಿಯಲ್ಲಿ ಶಿಕ್ಷಕರಾದರೂ, ಕಲೆ ಮತ್ತು ನಾಟಕ ರಂಗದಲ್ಲಿ ಅಪರೂಪದ ಛಾಪು ಮೂಡಿಸಿರುವ ನಾರಾಯಣ ನಾಯ್ಕ ಅವರು ರಾಜ್ಯ ಮಟ್ಟದ ಅಕ್ಷರ ನಾದ ಕಲೆ-ಸಾಹಿತ್ಯ-ಸಾಂಸ್ಕೃತಿಕ ವೇದಿಕೆ (ಬೆಂಗಳೂರು) ವತಿಯಿಂದ ‘ಕರಾವಳಿ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದರು. ಜೂನ್ 27, 2025 ರಂದು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ.
2005ರಲ್ಲಿ ಶ್ರೀವಲಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ತಮ್ಮ ಸೇವಾ ಪಯಣ ಆರಂಭಿಸಿದ ನಾರಾಯಣ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಪಾಠವನ್ನೇ, ಪ್ರೇರಣಾದಾಯಕವಾಗಿ ಬೋಧಿಸುತ್ತಾ, 10ನೇ ತರಗತಿಯಲ್ಲಿ ಸತತ ಮೂರು ಬಾರಿ ತಾಲ್ಲೂಕಿನ ಅತ್ಯುತ್ತಮ ಫಲಿತಾಂಶ ದಾಖಲಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಿಗೆ ಧಾರವಾಡದ ಕಟ್ಟಿಮನಿ ಸಂಸ್ಥೆಯ “ಬಸವರಾಜ ಕಟ್ಟಿಮನಿ” ಪ್ರಶಸ್ತಿ ನೀಡಿ ಗೌರವಿಸಿದ್ದರು.
ಅಭಿನಯ ಹಾಗೂ ನಿರ್ದೇಶನ ಕ್ಷೇತ್ರದಲ್ಲೂ ಅವರದು ಮಹತ್ತರ ಕೊಡುಗೆ. ಅನೇಕ ನಾಟಕಗಳಲ್ಲಿ ಖಳನಾಯಕನಾಗಿ ದಿಟ್ಟ ಅಭಿನಯ ತೋರಿದ ಅವರು, ಶ್ರೀಗುರು ತಾಲೂಕಾ ರಂಗಭೂಮಿ ಕಲಾವಿದರ ಸಂಘದಿಂದ “ಉತ್ತಮ ಕಲಾವಿದ” ಪ್ರಶಸ್ತಿಯನ್ನು ಪಡೆದಿದ್ದಾರೆ.
ಅವರು 2005ರಿಂದಲೇ ನಾಟಕ ನಿರ್ದೇಶಕರಾಗಿ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗಾಗಿ ರಚಿಸಿದ ನಾಟಕಗಳು ಕಳೆದ 20 ವರ್ಷಗಳಿಂದ ಜಿಲ್ಲಾಮಟ್ಟದಲ್ಲಿಯೂ ಆಯ್ಕೆಯಾಗುತ್ತಲೇ ಬಂದಿವೆ.
ಇವರಿಗೆ ರಾಜ್ಯ ಮಟ್ಟದ ಮನ್ನಣೆ ತಂದುಕೊಟ್ಟ ಕೆಲವು ಪ್ರಮುಖ ನಾಟಕಗಳು:
2013–14: ಸಂಗೊಳ್ಳಿ ರಾಯಣ್ಣ – ಐತಿಹಾಸಿಕ ನಾಟಕ, ರಾಜ್ಯಮಟ್ಟದ ಪ್ರಶಸ್ತಿ ವಿಜೇತ
2014–15: ಭೀಮ-ಘಟೋತ್ಕಜ – ಪೌರಾಣಿಕ ನಾಟಕ, ರಾಜ್ಯ ಮಟ್ಟಕ್ಕೆ ಆಯ್ಕೆ
2015–16: ಹಸಿವು – ಸಾಮಾಜಿಕ ನಾಟಕ, ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ
ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಂದ “ಉತ್ತಮ ನಿರ್ದೇಶಕ” ಪ್ರಶಸ್ತಿ, ತಾಲೂಕಾ ಆಡಳಿತದಿಂದ “ಕನ್ನಡ ರಾಜ್ಯೋತ್ಸವ” ಪ್ರಶಸ್ತಿ, ನಾನಾ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿಗಳನ್ನು ಪಡೆದಿರುವ ಅವರು, ಸರಕಾರಿ ನೌಕರರ ನಾಟಕಗಳು ಸತತ 8 ವರ್ಷ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಂತೆ ಯಶಸ್ವೀ ನಿರ್ದೇಶನವನ್ನು ಮಾಡಿದ್ದಾರೆ.
ಶಬ್ದಗಳ ಮಾಂತ್ರಿಕರು, ಕಂಚಿನ ಕಂಠದ ನಿರೂಪಕರು, ನಾಟಕದ ಸಂವೇದನಾತ್ಮಕ ನಿರ್ದೇಶಕರು ಎಂಬ ಹೆಗ್ಗಳಿಕೆಗೆ ಅರ್ಹರಾದ ನಾರಾಯಣ ನಾಯ್ಕ ಅವರ ಈ ಸಾಧನೆ ಕರಾವಳಿ ನಾಡಿನ ಹೆಮ್ಮೆಯಾಗಿದ್ದು, ಅವರ ಪ್ರತಿಯೊಂದು ಯಶಸ್ಸೂ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತಿದೆ. ಇವರಿಗೆ ಆತ್ಮೀಯರು, ಊರ ನಾಗರಿಕರು, ಎಲ್ಲರೂ ಅಭಿನಂದನೆಗಳು ಸಲ್ಲಿಸಿರುತ್ತಾರೆ.
ಕರಾವಳಿಯ ಕಲಾ ಕಂಚಿನ ಕಂಠದ ಶ್ರೀ ನಾರಾಯಣ ನಾಯ್ಕರಿಗೆ ರಾಜ್ಯಮಟ್ಟದ “ಕರಾವಳಿ ರತ್ನ”ಪ್ರಶಸ್ತಿ.
RELATED ARTICLES
