
ಭಟ್ಕಳ: ವೈದ್ಯಕೀಯ ಅಧ್ಯಯನ ಮುಗಿಸಿದ ಯುವ ವೈದ್ಯ ಡಾ. ಚಿತ್ತರಂಜನ್ ಅವರು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯ ಉದ್ದೂರಿನಿಂದ ಬಂದು ಉತ್ತರಕನ್ನಡ ಜಿಲ್ಲೆಯ ಜನರ ಮನೆ ಮಾತಾಗುತ್ತಾರೆ, ಶಾಸರಾಗಿ ಕೇವಲ ಎರಡೇ ವರ್ಷಗಳಲ್ಲಿ ರಾಜ್ಯ, ರಾಷ್ಟ್ರದ ಗಮನ ಸೆಳೆದು ಹಂತಕರ ಗುಂಡಿಗೆ ಬಲಿಯಾಗುತ್ತಾರೆ. ಅಂತಹ ಧೀಮಂತ ವ್ಯಕ್ತಿಯ ಹೆಸರಿನಲ್ಲಿ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದು ಈ ವರ್ಷದ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ಜು. 1ರಂದು ಶಿರಸಿಯಲ್ಲಿ ನಡೆಯಲಿದೆ.
ಪ್ರಥಮವಾಗಿ ಚಿತ್ತರಂಜನ್ ಪ್ರಶಸ್ತಿಗೆ ಆಯ್ಕೆಯಾದ ಗಣೇಶ ಹೆಗಡೆ ಇಟಗಿ ಇವರು ಹಲವಾರು ವರ್ಷಗಳಿಂದ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಿದ್ದಾಪುರದವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ಚಿತ್ತರಂಜನ್ ನೀಡುತ್ತಿರುವ ಸೇವೆ ಹಾಗೂ ಮನೆ ಮನೆ ಭೇಟಿಯೇ ಅವರ ಜನಪ್ರಿಯತೆಗೆ ಕಾರಣವಾಗಿತ್ತು. ಇವರ ವೈದ್ಯಕೀಯ ಸೇವೆಯಿಂದ ಜನತೆ ಗುಣಮುಖರಾಗುತ್ತಿದ್ದರಲ್ಲದೇ ಅವರ ಮೃಧು ಭಾಷೆ, ಸಲಹೆಗಳು ಎಂತಹ ಕಾಯಿಲೆಯನ್ನು ಸಹ ಉಪಶಮನ ಮಾಡುವ ಅವರ ಮಾತುಗಳು ಜನತೆಗೆ ಇಷ್ಟವಾಗ ತೊಡಗಿದ್ದು ಇವರ ಜನಪ್ರಿಯತೆಗೆ ಕಾರಣವಾಯಿತು. ಅವರು ನೀಡುತ್ತಿದ್ದ ಕೆಂಪು, ನೀಲಿ, ಕಂದು ಬಣ್ಣ ಸೇರಿದಂತೆ ವಿವಿಧ ಬಣ್ಣಗಳ ಕಷಾಯ, ಅಪರೂಪಕ್ಕೆ ಮಾತ್ರೆಗಳು, ಇಂಜಕ್ಷನ್ ಇತ್ಯಾದಿಗಳಲ್ಲಿಯೇ ಎಂತಹ ಕಾಯಿಲೆಯನ್ನು ಗುಣಪಡಿಸುವ ವೈದ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ಅವರನ್ನು ಹುಡುಕಿಕೊಂಡು ಬರುವ ರೋಗಿಗಳು
ಲೆಕ್ಕವಿಲ್ಲದಷ್ಟು ತಮ್ಮಲ್ಲಿ ಚಿಕಿತ್ಸೆಗೆಂದು ಬಂದ ರೋಗಿಗಳಲ್ಲಿ ಹಣವಿಲ್ಲದಿದ್ದರೆ, ಎಂದೂ ವಾಪಾಸು ಕಳುಹಿಸದ ಅವರು ಮತ್ತೆ ಕೊಡುವಂತೆ ಹೇಳಿ ಕಳುಹಿಸುತ್ತಿರುವುದೇ ಜನಪ್ರಿಯತೆ ಎತ್ತರಕ್ಕೇರಲು ಒಂದು ಕಾರಣವಾಯಿತು.
ವೈದ್ಯಕೀಯ ಸೇವೆಯೊಂದಿಗೆ ಸಂಘ ಸಂಸ್ಥೆಗಳು, ಧರ್ಮದಾಯಿ ಸಂಸ್ಥೆಗಳು, ಗ್ರಾಮಗಳನ್ನು ದತ್ತು ಪಡೆದು ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತಾ ಕನಸು ಕಂಡವರು. ಡಾ. ಯು. ಚಿತ್ತರಂಜನ್ ತಮ್ಮ ಚಿಕಿತ್ಸಾಲಯದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಭಟ್ಕಳದ ತೀರಾ ಹಿಂದುಳಿದ ಗ್ರಾಮಗಳಾದ ಕರಿಕಲ್ ಮತ್ತು ಕಿತ್ಸೆಯನ್ನು ದತ್ತು ಗ್ರಾಮವಾಗಿ ಸ್ವೀಕರಿಸಿ ಅಲ್ಲಿನ ಜನರಿಗೆ ಉಚಿತ ಚಿಕಿತ್ಸೆಯೊಂದಿಗೆ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದಕ್ಕೆ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ಮಾಡಿದ ಏಕೈಕ ವ್ಯಕ್ತಿ. ಈ ಗ್ರಾಮಗಳಲ್ಲಿ ಮುಖ್ಯವಾಗಿ ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಉಚಿತ ಸೇವೆ ನೀಡಿವುದರ ಜೊತೆಗೆ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸತ್ವರಂಪರೆ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದರು.
ಡಾ. ಯು. ಚಿತ್ತರಂಜನ್ ಜನಸೇವೆಯಲ್ಲಿರುವಾಗಲೇ ಅವರಿಗೆ ಜನಸಂಘದ ಕಡೆಗೆ ಒಲವು ಮೂಡಿತ್ತು. ಅಂದಿನಿಂದ ಅವರು ವೈದ್ಯಕೀಯ ಸೇವೆಯೊಂದಿಗೆ ಜನಸಂಘದ ಕಾರ್ಯವನ್ನು ಮಾಡಲು ಆರಂಭಿಸಿದರು. ಅದುವೇ ನಂತರ ಬಿ.ಜೆ.ಪಿ. ಪಾರ್ಟಿಯಾಗಿ ಇಡೀ ಉತ್ತರ ಕನ್ನಡವನ್ನೇ ಆಳುವಷ್ಟು ಬೃಹದಾಕಾರವಾಗಿ ಬೆಳೆಯುತ್ತದೆ ಎಂದು ಅವರು ಕನಸಿನಲ್ಲೂ ಕಂಡಿರಲಿಲ್ಲ. ಅವರು 1994ರ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮತಗಳಿಸಿ ಆಯ್ಕೆಯಾದ ಶಾಸಕ ಎನ್ನುವ
ಹೆಗ್ಗಳಿಕೆಯೊಂದಿಗೆ ವಿಧಾನ ಸಭೆ ಪ್ರವೇಶಿಸಿದರು. ವಿಧಾನ ಸಭೆಯನ್ನು ಹೊಕ್ಕ ಚಿತ್ತರಂಜನ್ ಅಲ್ಲಿಯೂ ಕೂಡಾ ಸೈ ಎನಿಸಿಕೊಂಡರು. ಪ್ರಥಮ ಬಾರಿಗೆ ಶಾಸಕರಾಗಿ ಸದನ ಪ್ರವೇಶಿಸಿದರೂ ತಾಸುಗಟ್ಟಲೆ ನಿರಂತರವಾಗಿ ನಿಖರವಾದ ಅಂಕಿ ಅಂಶಗಳೊಂದಿಗೆ ಮಾತನಾಡಿದ ಇವರು ಉತ್ತಮ ಸಂಸದೀಯ ಪಟು ಎನ್ನುವ ಗೌರವಕ್ಕೆ ಕೂಡಾ ಪಾತ್ರರಾದರು.
ಸಾಮಾಜಿಕ, ಶೈಕ್ಷಣಿಕ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರು ಭಟ್ಕಳ ಪುರಸಭೆಯ ಉಪಾಧ್ಯಕ್ಷರಾಗಿ, ಪ್ರತಿಸ್ಥಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಟ್ರಸ್ಟಿಯಾಗಿ, ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮಾರಿಕಾಂಬಾ ದೇವಸ್ಥಾನದ ಟ್ರಸ್ಟಿಯಾಗಿ, ಜನತಾ ಕೋ ಆಪರೇಟಿವ್ ಸೊಸೈಟಿ ಇದರ ಸಂಸ್ಥಾಪಕ ನಿರ್ದೇಶಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು.
ಡಾ. ಚಿತ್ತರಂಜನ್ ಅವರ ಹೆಸರಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ದತ್ತಿನಿಧಿ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಂದಿನ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ದತ್ತಿನಿಧಿಗೆ ಸ್ವತಃ ಹಣವನ್ನು ಇಟ್ಟು, ಚಿತ್ತರಂಜನ್ ಅಭಿಮಾನಿಗಳಿಂದ ಹಣ ಸಂಗ್ರಹಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದರೂ ಕೂಡಾ ಕೋವಿಡ್‌ನಿಂದಾಗಿ ಸಾಧ್ಯವಾಗಿರಲಿಲ್ಲ. ಜನತಾ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಮಂಕಾಳ ವೈದ್ಯ ಅವರು ಸಂಸ್ಥಾಪಕರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗೆ ಸಹಕರಿಸುವ ಭರವಸೆಯನ್ನು ನೀಡಿದ್ದು ಪ್ರಶಸ್ತಿಗೆ ಇನ್ನಷ್ಟು ಬಲ ಬಂದಿದೆ. ಈ ಬಾರಿ ಅಧ್ಯಕ್ಷರಾಗಿದ್ದ ಜಿ. ಸುಬ್ರಾಯ ಭಟ್ಟ ಬಕ್ಕಳ ಅವರೊಂದಿಗೆ ಚರ್ಚಿಸಿ ಪ್ರಶಸ್ತಿಯನ್ನು ಈ ವರ್ಷದಿಂದ ಪ್ರದಾನ ಮಾಡಲು ತೀರ್ಮಾನಿಸಿದ್ದು ಪ್ರಥಮವಾಗಿ ಡಾ. ಚಿತ್ತರಂಜನ್ ರವರ ಒಡನಾಡಿ ಪತ್ರಕರ್ತ ಗಣೇಶ ಹೆಗಡೆ ಇಟಗಿ ಅವರಿಗೆ ನೀಡಲು ನಿರ್ಧರಿಸಲಾಗಿದೆ.
