ಇಲ್ಲಿನ ಪ್ರತಿಷ್ಠಿತ ICSE ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಉತ್ತರ ಕನ್ನಡದ (Uttara Kannada) ಅಚೀವರ್ಸ್ ಚೆಸ್ ಸ್ಕೂಲ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿ (chess tournament) ಜರುಗಿತು. ಉತ್ತರ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ೭೫ ಕ್ಕೂ ಹೆಚ್ಚು ಸ್ಫರ್ಧಾಳುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ಆಟವನ್ನು ಆಡಬೇಕು. ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ, ಉನ್ನತ ಅವಕಾಶಕ್ಕಾಗಿ ಶ್ರಮಿಸಬೇಕೆಂದು ಕರೆಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಟ್ರಸ್ಟಿ ರಮೇಶ ಖಾರ್ವಿ ಮಾತನಾಡಿ, ಭಟ್ಕಳದಲ್ಲಿ ಸತತ ಎರಡು ವರ್ಷದಿಂದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು (chess tournament) ಆಯೋಜಿಸುತ್ತಿರುವ ಭಟ್ಕಳ ಎಜ್ಯುಕೇಷನ್ ಟ್ರಸ್ಟಿನ ಹಿರಿಮೆಯನ್ನು ಜನರಿಗೆ ತಿಳಿಸಿದರು.
ವಿದ್ಯಾಂಜಲಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕಾಮತ ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಅಚೀವರ್ಸ್ ಚೆಸ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಗುರುರಾಜ ಶೆಟ್ಟಿ ಚೆಸ್ ಕ್ರೀಡೆಯಿಂದ ಸಿಗುವ ಪ್ರಯೋಜನಗಳು ಮತ್ತು ಸರ್ಕಾರದಿಂದ ಸಿಗುವ ಸವಲತ್ತುಗಳ ಕುರಿತು ಬೆಳಕು ಚೆಲ್ಲಿದರು. ಈ ಪಂದ್ಯಾವಳಿಯಲ್ಲಿ ವಿಜೇತರಾದ ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆ, ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಹೊನ್ನಾವರದ (Honnavar) ಹೋಲಿ ರೋಜರಿ ಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ನೇರ ಅರ್ಹತೆ ಪಡೆದರು. ವಿದ್ಯಾಂಜಲಿ ಶಾಲೆಯ ಶಿಕ್ಷಕಿ ಪ್ರೀತಿ ಪ್ರಭು ಮತ್ತು ನೀಶಾ ಫರ್ನಾಂಡೀಸ್ ನಿರೂಪಿಸಿದರು. ಗೀತಾ ನಾಯ್ಕ ವಂದಿಸಿದರು.
