ಭಟ್ಕಳ: ಸಚಿವ ಮಂಕಾಳ ವೈದ್ಯ ಅಭಿಮಾನಿ ಬಳಗ, ಬೀನಾ ವೈದ್ಯ ಶಿಕ್ಷಣ ಸಂಸ್ಥೆ, ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಇಂದು ಬೀನಾ ವೈದ್ಯ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ರಕ್ತದಾನ ಎಂಬುದು ಶ್ರೇಷ್ಠ ದಾನ. ರಕ್ತಕ್ಕೆ ರಕ್ತವೇ ಪರ್ಯಾಯ ಹೊರತು ಎಷ್ಟೇ ಹಣವಿದ್ದರೂ ಸಹ ಅದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಎಷ್ಟೋ ಜನರು ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡುವುದನ್ನು ನೋಡಿದ್ದೇವೆ. ಆದ್ದರಿಂದ ನಾವು ನೀಡುವ ಈ ರಕ್ತ ಇನ್ನೊಂದು ಜೀವದ ರಕ್ಷಣೆಗೆ ನೆರವಾಗುತ್ತದೆ. ಭಟ್ಕಳ ಇದು ಒಂತರಾ ರಕ್ತದಾನಿಗಳ ತವರೂರು ಇದ್ದಂಗೆ. ಇಲ್ಲಿನ ಅನೇಕ ರಕ್ತದಾನಿಗಳು ಇಲ್ಲಿಂದ ಮಂಗಳೂರಿನ ವರೆಗೆ ತಮ್ಮದೇ ಖರ್ಚಿನಲ್ಲಿ ಹೋಗಿ ರಕ್ತ ಕೊಟ್ಟು ಬಂದವರಿದ್ದಾರೆ. ಭಟ್ಕಳದಲ್ಲಿ ಅನೇಕ ರಕ್ತದಾನಿಗಳಿದ್ದಾರೆ. ಹಲವಾರು ಜನರ ಪ್ರಾಣ ಉಳಿಸುವಲ್ಲಿ ಇವರು ನೆರವಾಗಿದ್ದಾರೆ. ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಇಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ತಾವು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಇನ್ನೊಬ್ಬರ ಜೀವಕ್ಕೆ ಆಸರೆಯಾಗೋಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ ರಕ್ತದಾನ ಮಾಡಿದರೆ ಏನಾದ್ರೂ ತೊಂದ್ರೆ ಆಗಬಹುದೇನೋ ಎಂಬ ಗೊಂದಲ ಕೆಲವರಲ್ಲಿದೆ. ಆದರೆ ರಕ್ತದಾನ ಮಾಡುವುದರಿಂದ ದೇಹಕ್ಕೆ, ಆರೋಗ್ಯಕ್ಕೆ ಲಾಭವಿದೆ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ ಮುಂದೆ ಬರಬಹುದಾದ ಅನಾರೋಗ್ಯವನ್ನು ತಪ್ಪಿಸಬಹುದು..ರಕ್ತದಾನ ಮಾಡುವ ವ್ಯಕ್ತಿಯು ಹೃದಯಾಘಾತ ದಂತಹ ಕಾಯಿಲೆಗಳಿಂದ ಶೇಕಡಾ 30 ರಷ್ಟು ತಪ್ಪಿಸಿಕೊಳ್ಳಬಹುದು.ಬೇರೆಯವರ ಜೀವ ಉಳಿಸುವುದರ ಜೊತೆಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ವೈದ್ಯ ಮಾತನಾಡಿ ವಿಶ್ವ ರಕ್ತದಾನಿಗಳ ದಿನಾಚರಣೆಯಂದು ಈ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಹೆಮ್ಮೆಯೆನಿಸುತ್ತದೆ. ಎಲ್ಲರೂ ರಕ್ತದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗೋಣ ಎಂದ ಅವರು ಎಲ್ಲ ರಕ್ತದಾನಿಗಳಿಗೆ ವಿಶ್ವ ರಕ್ತದಾನಿಗಳ ದಿನಾಚರಣೆ ಯ ಶುಭಾಷಯ ಕೋರಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುರ್ಡೇಶ್ವರ ಹಿತರಕ್ಷಣಾ ಸಮಿತಿ ಎಸ್.ಎಸ್. ಕಾಮತ್ ಮಾತನಾಡಿದರು.
ಬೀನಾ ಶಿಕ್ಷಣಸಂಸ್ಥೆಯ ಕನ್ನಡ ಶಿಕ್ಷಕ ಮಹೇಶ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು.ಹಿಂದಿ ಶಿಕ್ಷಕ ಗಣಪತಿ ವಂದನಾರ್ಪಣೆ ಮಾಡಿದರು ಶಿಕ್ಷಕಿ ಹೇಮಾವತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ನಾಯ್ಕ, ಭಟ್ಕಳ ತಾಲೂಕಿನ ಅನೇಕ ರಕ್ತದಾನಿಗಳು,ಸಾರ್ವಜನಿಕರು,ಆರೋಗ್ಯ ಇಲಾಖೆ ಅಧಿಕಾರಿಗಳು, ಮಂಕಾಳ ವೈದ್ಯ ಅಭಿಮಾನಿಗಳು ಉಪಸ್ಥಿತರಿದ್ದರು.
