
ಕಾರವಾರ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಮತ್ತು ತಾಲೂಕು ಪಂಚಾಯತ್ ಕಾರವಾರ ಇವರ ಸಹಯೋಗದಲ್ಲಿ ನಗರದ ತಹಶೀಲ್ದಾರ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಕ್ಕ ಕೆಫೆಯನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಶನಿವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಸಿಇಓ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಝುಪಿಶಾನ್ ಹಕ್, ತಹಶೀಲ್ದಾರ ನಿಶ್ಚಲ್ ನರೋನ್ಹಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್
ಮೇಸ್ತಾ ಮತ್ತಿತರರು ಉಪಸ್ಥಿತರಿದ್ದರು.
ಅಕ್ಕ ಕೆಫೆ ಸ್ಥಾಪನೆ ಮುಖ್ಯ ಉದ್ದೇಶ ಸಂಜೀವಿನಿ ಯೋಜನೆಯಡಿ ನೋಂದಣಿಯಾದ ಮಹಿಳಾ ಸ್ವಸಾಯ ಗುಂಪುಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆ ಗಳನ್ನು ಒದಗಿಸುವುದಾಗಿದೆ. ಗುಣಮಟ್ಟದ ಶುಚಿ ರುಚಿಯಾದ ಪೌಷ್ಟಿಕ ಆಹಾರವನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತದೆ. ಸದರಿ ಅಕ್ಕ ಕೆಫೆ ನಿರ್ವಹಣಾ ಜವಾಬ್ದಾರಿಯನ್ನು ತಾಲೂಕು ಪಂಚಾಯತದಡಿ ಇರುವ ತಾಲೂಕಾ ಸಂಜೀವಿನಿ ಒಕ್ಕೂಟದ ಮುಖಾಂತರ ಆಯ್ಕೆ ಮಾಡಲಾದ
ಸಿದ್ದಿವಿನಾಯಕ ಸ್ವಸಹಾಯ ಗುಂಪಿಗೆ ವಹಿಸಲಾಗಿದೆ. ಸದರಿ ಗುಂಪಿಗೆ ಸೂಕ್ತ ತರಬೇತಿಯನ್ನು ಸಂಜೀವಿನಿ ಯೋಜನೆಯಿಂದ ನೀಡಲಾಗಿರುತ್ತದೆ.
ಅಕ್ಕ ಕೆಫೆಯಲ್ಲಿ ಕರಾವಳಿ ಶೈಲಿಯ ಶಾಖಾಹಾರಿ ಮತ್ತು ಮಾಂಸ ಆಹಾರವನ್ನು ಸಿದ್ಧಪಡಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಸದರಿ ಅಕ್ಕ ಕೆಫೆ ನಿರ್ವಹಣೆಗೆ ಸ್ವಸಹಾಯ ಗುಂಪಿಗೆ ಸಂಜೀವಿನಿ ಯೋಜನೆಯಡಿ ಮತ್ತು ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಸದರಿ ಅಕ್ಕ ಕೆಫೆಯ ಮೇಲುಸ್ತುವಾರಿಯನ್ನು ಕಾರವಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಮೂಲಕ ನಿರ್ವಹಿಸಲಾಗುತ್ತದೆ.

