
ಭಟ್ಕಳ: ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಕಣ್ಣನ್ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆಯ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿತ್ತು.
ಜು.10 ರ ಬೆಳಗ್ಗೆ 7:22 ಕ್ಕೆ ಈ ಇ-ಮೇಲ್ ಸಂದೇಶವನ್ನು ಎರಡು ಬಾರಿ ಕಳುಹಿಸಲಾಗಿದ್ದು, kannnannandik@gmail.com ನಿಂದ ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಸಂದೇಶ ರವಾನಿಸಲಾಗಿತ್ತು.
ಉತ್ತರ ಕನ್ನಡ ಎಸ್. ಪಿ. ಎಂ.ನಾರಾಯಣ ಮಾರ್ಗದರ್ಶನದಲ್ಲಿ ಈ ಪ್ರಕರಣದ ಬೆನ್ನು ಹತ್ತಿದ ಭಟ್ಕಳ ಪೊಲೀಸರು ಕಣ್ಣನ್ ಗುರುಸ್ವಾಮಿ ಎಂಬ ತಮಿಳುನಾಡು ಮೂಲದ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಈ ಹಿಂದೆಯೂ ಕೂಡ ಮೈಸೂರು, ಬಳ್ಳಾರಿ ಮತ್ತಿತರ ಕಡೆಗಳಲ್ಲಿ ಸ್ಫೋಟದ ಬೆದರಿಕೆ ಹಾಕಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಇನ್ನೊಬ್ಬ ವ್ಯಕ್ತಿಯ ಕೈವಾಡದ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು ಆತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ನಾಳೆ ಆರೋಪಿಯನ್ನು ಕಾರವಾರಕ್ಕೆ ತಂದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
