ಭಟ್ಕಳ: ತಾಲೂಕಿನ ಯಲವಡಿಕವೂರ್ ಗ್ರಾಮ ಪಂಚಾಯತ, ಸರಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡೀನ್ ಇವೆಲ್ಲದರ ಒಂದೇ ಮೈದಾನದಂತಿರುವ ಗ್ರಾಮ ಪಂಚಾಯತ್ ಎದುರು ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಹೊರರಾಜ್ಯದ ಅನೇಕ ಅಲೆಮಾರಿಗಳು ಬಂದು ಟೆಂಟ್ ಹೂಡಿಕೊಂಡು ತಿಂಗಳುಗಟ್ಟಲೆ ವಾಸ್ತವ್ಯ ಹೂಡುತ್ತಾರೆ. ನೂರಾರು ಸಂಖ್ಯೆಯಲ್ಲಿ ಬಂದು ಇಲ್ಲಿ ಉಳಿದುಕೊಳ್ಳುವ ಇವರುಗಳು,ಇಡೀ ಮೈದಾನವನ್ನು ಆಕ್ರಮಿಸಿಕೊಂಡಿರುತ್ತಾರೆ. ಅಲ್ಲೇ ಅಡುಗೆ, ಅದೇ ಮೈದಾನದಲ್ಲೇ ಶೌಚ, ಅಲ್ಲೇ ಸ್ನಾನ, ಎಲ್ಲವೂ ಅಲ್ಲೇ… ಅದೇ ಮೈದಾನದಲ್ಲಿ ಪ್ರತಿದಿನ ನೂರಾರು ಪ್ರಾಥಮಿಕ ಶಾಲೆಯ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು,ವಿದ್ಯಾರ್ಥಿನಿಯರು ಓಡಾಡಬೇಕು, ಆಟವಾಡಬೇಕು. ಎಲ್ಲೆಲ್ಲಿ ಕಂಡರು ಅಲ್ಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿ ಪಬ್ಲಿಕ್ ಟಾಯ್ಲೆಟ್ ನಂತೆ ಮಾಡಿ ಇಟ್ಟಿದ್ದಾರೆ. ಅದೂ ಅಲ್ಲದೆ ಹಗಲು ರಾತ್ರಿ ಎನ್ನದೇ ಕಾಲೇಜು ಆರಂಭವಾಗಿರುವಾಗಲೇ ಮುಲಾಜಿಲ್ಲದೆ, ಮರ್ಯಾದೆಯು ಇಲ್ಲದೇ ತಂಬಿಗೆ ಹಿಡಿದು ಶೌಚಕ್ಕೆ ಹೊರಡುವ ಗಂಡಸರು , ಹೆಂಗಸರು ಇಲ್ಲಿನ ಜನತೆಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಗ್ರಾಮ ಪಂಚಾಯತ ಎದುರಿಗೆ ಕಸ ಕಡ್ಡಿಗಳನ್ನು ಹಾಕಿ ರಾಡಿ ಮಾಡಿಟ್ಟರು ಸಹ ಅಧಿಕಾರಿಗಳು ಅವರ ಬಗ್ಗೆ ಗಮನ ಹರಿಸುತ್ತಿಲ್ಲ. ಎಲ್ಲ ಕಡೆಗಳಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ ಗ್ರಾಮಸ್ಥರಿಗೆ ಕಸ ವಿಲೇವಾರಿ ಬಗ್ಗೆ, ಬಯಲು ಶೌಚ ಮಾಡಬಾರದೆಂದು, ಹಾಗೆಯೇ ಸ್ವಚ್ಛತೆಯ ಬಗ್ಗೆ ತಿಳಿಹೇಳುವ ಪಂಚಾಯತ ಅಧಿಕಾರಿಗಳು ತಮ್ಮ ಕಚೇರಿಯ ಎದುರಿಗೆ ಇರುವ , ಊರಿನ ಜನತೆಗೆ ತಲೆನೋವಾಗಿ ಪರಿಣಮಿಸಿರುವ ಅನಧಿಕೃತವಾಗಿ ನೆಲೆಯೂರಿರುವ ಅನ್ಯ ರಾಜ್ಯದ, ಅನ್ಯ ಜಿಲ್ಲೆಯ ಅಲೆಮಾರಿ ಜನಗಳ ಬಗ್ಗೆ ಏಕೆ ಎಚ್ಚರವಹಿಸುತ್ತಿಲ್ಲ ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಮುಂತಾದ ಪ್ರಕರಣಗಳ ತಡೆಗಾಗಿ ಇಂತಹ ಜನರ ಬಗ್ಗೆ ಎಚ್ಚರ ವಹಿಸಬೇಕಾದದ್ದು ಅವಶ್ಯಕತೆ ಇದೆ. ರಾತ್ರಿಯಾದರೆ ಅವರವರೇ ದೊಡ್ಡದಾಗಿ ಜಗಳವಾಡುತ್ತಾ ಕೂಗಾಡುವುದು ಸಾಮಾನ್ಯವಾಗಿ ಹೋಗಿದೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಕಾಲೇಜುಗಳ ಶೌಚಾಲಯಗಳ ಬಾಗಿಲು ಮುರಿದು ಗಲೀಜು ಮಾಡಿದ ಉದಾಹರಣೆ ಕೂಡ ಇದೆ. ಕಾಲೇಜು ಅಕ್ಕಪಕ್ಕದಲ್ಲಿ ಮಲ ವಿಸರ್ಜನೆ ಮಾಡಿ ತಿರುಗಾಡದಂತ ಸ್ಥಿತಿ ನಿರ್ಮಾಣವಾಗಿದೆ. ತಂಡೋಪತಂಡವಾಗಿ ಆಗಮಿಸಿ ಇಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿ ಗ್ರಾಮದ ಸ್ವಚ್ಛತೆಯನ್ನು ಹಾಳುಗೆಡವುಹ ಇಂತಹ ಅಪರಿಚಿತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಜನತೆಯ ಆಗ್ರಹವಾಗಿದೆ.
ಅಲೆಮಾರಿಗಳ ಆಶ್ರಯ ತಾಣ ಆಗಿರುವ ಯಲ್ವಡಿಕವೂರ್ ಗ್ರಾಮ ಪಂಚಾಯತ್ ಆವರಣ: ಬಯಲಲ್ಲೇ ಅಡುಗೆ,ಬಯಲಲ್ಲೇ ಶೌಚ!
RELATED ARTICLES
