ಐಪಿಎಲ್ 2024ರ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವ ನಾಲ್ಕು ತಂಡಗಳು ಈಗಾಗಲೇ ಖಚಿತವಾಗಿವೆ. ಗುಜರಾತ್, ಆರ್‌ಸಿಬಿ, ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅಗ್ರ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ. ಲೀಗ್ ಹಂತದಲ್ಲಿ ಇನ್ನೂ ಏಳು ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ-ಆಫ್ ರೇಸ್ ಅಂತ್ಯಗೊಂಡಿದೆ.

ನವದೆಹಲಿ: ಕಳೆದ ಹಲವು ವಾರಗಳಿಂದ ಕ್ರಿಕೆಟಿಗರು, ಅಭಿಮಾನಿಗಳಲ್ಲಿದ್ದ ಐಪಿಎಲ್ ಪ್ಲೇ-ಆಫ್ ಸ್ಥಾನದ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ಗುಜರಾತ್, ಆರ್‌ಸಿಬಿ, ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನು ಮುಂದೆ ಅಗ್ರ-2 ಸ್ಥಾನಕ್ಕೆ ಈ ತಂಡಗಳು ತೀವ್ರ ಪೈಪೋಟಿ ನಡೆಸಲಿವೆ.
ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಿಯಾದ ತಂಡಗಳು ಕ್ವಾಲಿಫೈಯರ್-1ರಲ್ಲಿ ಆಡಲಿದ್ದು, ಅದರಲ್ಲಿ ಸೋತರೂ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಸಿಗಲಿದೆ. 3 ಮತ್ತು 4ನೇ ಸ್ಥಾನಿಯಾದ ತಂಡಗಳು ಎಲಿಮಿನೇಟರ್ ಆಡಲಿದ್ದು, ಗೆದ್ದ ತಂಡ ಕ್ವಾಲಿಫೈಯರ್-2ಗೆ ಪ್ರವೇಶಿಸಿದರೆ, ಸೋತ ತಂಡ ಹೊರಬೀಳಲಿದೆ. ಹೀಗಾಗಿ ಪ್ರತಿ ತಂಡಕ್ಕೂ ಅಗ್ರ-2 ಸ್ಥಾನ ಮಹತ್ವದ್ದು. ಸದ್ಯ ಅಗ್ರ-4ರಲ್ಲಿರುವ ಎಲ್ಲಾ ತಂಡಗಳಿಗೂ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಹೀಗಾಗಿ ಲೀಗ್ ಹಂತದ ಕೊನೆ ಪಂದ್ಯದವರೆಗೂ ಭಾರೀ ಪೈಪೋಟಿ, ಕುತೂಹಲ ನಿರೀಕ್ಷೆಯಿದೆ.
